ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚುತ್ತಿದೆ. ಇದು ಹಲವು ವಿಷಯಕ್ಕೆ ಕೆಲವರಿಗೆ ಒಳ್ಳೆಯದಾಗಿರಬಹುದು, ಆದರೆ ಅದನ್ನೇ ಮತ್ತೆ ಕೆಲವರು ಬಳಸಿಕೊಂಡು ಖತರ್ನಾಕ್ ಪ್ಲಾನ್ ಮಾಡಿ ಅಮಾಯಕರ ಜೀವ ಹಿಂಡಿ ಬಿಡುತ್ತಾರೆ. ಹೀಗಾಗಿ ಸೋಷಿಯಲ್ ಮೀಡಿಯಾ ಬಳಸುತ್ತಿರುವವರು ಅತೀ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮಾನದ ಜೊತೆಗೆ ಹಣವೂ ಕಳೆದುಕೊಂಡು ಕೊನೆಗೆ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇಂತಹುದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ವರದಿಯಾಗಿದೆ. ಪೊಲೀಸರ ಸಮಯ ಪ್ರಜ್ಞೆಯಿಂದ ಓರ್ವ ವಿದ್ಯಾರ್ಥಿಯ ಬದುಕೇ ಇದೀಗ ರಕ್ಷಿಸಲ್ಪಟ್ಟಿದೆ.
ಆತ ಇನ್ನೂ ವಿದ್ಯಾರ್ಥಿ, ಹದಿಹರೆಯ ಬೇರೆ, ಮೀಸೆ ಚಿಗುರುವ ವಯಸ್ಸಿನಲ್ಲಿ ದೇಶ ಕಾಣೋದಿಲ್ಲ ಅಂತಾರಲ್ಲ ಹಾಗೆ. ಈ ವಿದ್ಯಾರ್ಥಿಗೆ ಫೇಸ್ ಬುಕ್ ನಲ್ಲಿ ಚಂದದ ಆಟಿಯೊಂದು ಪರಿಚಯವಾಗಿದೆ. ಇದೇ ಪರಿಚಯದ ನೆಪದಲ್ಲಿ ಆಂಟಿಯು ವಿಡಿಯೋ ಕರೆ ಮಾಡುತ್ತೇನೆ ಸ್ವಲ್ಪ ತೆಗಿ ಅಂತ ಹೇಳಿದ್ದಾಳೆ, ವಿಡಿಯೋ ಕರೆ ಬರುತ್ತಿದ್ದಂತೆ ವಿದ್ಯಾರ್ಥಿ ಅದನ್ನು ಸ್ವೀಕರಿಸಿದ್ದಾನೆ, ಆಗ ಎದುರಿಗೆ ಕಾಣಿಸಿಕೊಂಡಿದ್ದು ಆಕೆಯ ನಗ್ನ ದೇಹ. ಈತ ವಿಡಿಯೋ ನೋಡಿದ್ದೇ ತಡ ಆಂಟಿ ಮತ್ತು ಗ್ಯಾಂಗ್ ಆತನ ಮುಖವನ್ನು ಬಳಸಿಕೊಂಡು ಅಶ್ಲೀಲ ವಿಡಿಯೋ ಜೊತೆ ಎಡಿಟ್ ಮಾಡಿಕೊಂಡಿದೆ. ನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದೆ.
ಈ ಆಂಟಿ ಮತ್ತು ಗ್ಯಾಂಗ್ ಕೆಲಸಕ್ಕೆ ವಿದ್ಯಾರ್ಥಿ ಕಂಗಾಲಾಗಿದ್ದಾನೆ, ಹಣದ ಬೇಡಿಕೆ ಹೆಚ್ಚಾದಾಗ ಎಪಿಸೋಡ್ ಬಿಡುಗಡೆ ಮಾಡುತ್ತೇವೆ ಎಂದು ಅವರು ಬೆದರಿಕೆ ಕರೆ ಜಾಸ್ತಿ ಆದಾಗ ತಡೆಯಲಾಗದೆ ಮಾಧ್ಯಮ ಪ್ರತಿನಿಧಿಯೊಬ್ಬರ ಜೊತೆ ಹೇಳಿಕೊಂಡಿದ್ದಾನೆ. ತಕ್ಷಣ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಕರೆ ಮಾಡಿದ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸುವ ಮೂಲಕ ಪ್ರಕರಣದ ಸುಖಾಂತ್ಯ ಕಂಡಿದೆ. ಇಂತಹ ಹಲವಾರು ಪ್ರಕರಣಗಳು ಇತ್ತೀಚೆಗೆ ನಡೆಯುತ್ತಿದೆ. ಹೀಗಾಗಿ ಯಾರಾದರೂ ಮುಖ ತೋರಿಸಿ ಸಿಕ್ಕಿಬಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ಸೈಬರ್ ಕ್ರೈಂ ಸಹಾಯ ಸಂಖ್ಯೆ 1930ಕ್ಕೆ ಸಂಪರ್ಕಿಸಿ ಸಹಾಯ ಯಾಚಿಸಬಹುದು.