ನ್ಯೂಸ್ ನಾಟೌಟ್: ಹಲವಾರು ರೀತಿಯ ಅವಕಾಶ, ಉದ್ಯೋಗವನ್ನು ಸೃಷ್ಟಿಸುವ ಏವಿಯೇಷನ್ ಸರ್ಟಿಫಿಕೆಟ್ ಕೋರ್ಸ್ ನಮ್ಮ ಸುಳ್ಯದಲ್ಲಿ ಆರಂಭಗೊಂಡಿದೆ. ಇಲ್ಲಿನ ನೆಹರು ಮೆಮೋರಿಯಲ್ ಕಾಲೇಜು ಮತ್ತು ಕೆರಿಯರ್ ಡೆಸ್ಟಿನಿ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏವಿಯೇಷನ್ ಸರ್ಟಿಫಿಕೆಟ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮ ಶನಿವಾರ (ನ.16) ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್(ರಿ.) ಸುಳ್ಯ ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕೌಶಲಗಳನ್ನು ವೃದ್ಧಿಸಿಕೊಂಡು ಹೊಸ ರೀತಿಯಲ್ಲಿ ಜೀವನವನ್ನು ಕಟ್ಟುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಶೇಷ ರೀತಿಯ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ನಿಟ್ಟಿನಲ್ಲಿ ಹಾಗೂ ಉದ್ಯೋಗ ಅವಕಾಶವನ್ನು ಸೃಷ್ಟಿಸುವ ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಪ್ರಾಸ್ತಾವಿಕ ಮಾತನಾಡಿದರು. ಕೆರಿಯರ್ ಡೆಸ್ಟಿನಿ ಮಂಗಳೂರು ಇದರ ಪ್ರೊಪ್ರೈಟರ್ ಜಯಶ್ರೀ ಕೆ. ಇವರು ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೆರಿಯರ್ ಡೆಸ್ಟಿನಿ ಮಂಗಳೂರು ಇದರ ತರಬೇತುದಾರರಾದ ರೋಶನ್ ತರಬೇತಿ ನೀಡಿದರು. ಅನ್ವಯ ತೃತೀಯ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಪ್ರತಿ ಶನಿವಾರ ಏವಿಯೇಷನ್ ಕೋರ್ಸ್ ನ ತರಗತಿ ನಡೆಯಲಿದ್ದು, ಪದವಿಯೊಂದಿಗೆ ಏವಿಯೇಷನ್ ಸರ್ಟಿಫಿಕೇಟ್ ಕೋರ್ಸ್ ಪಡೆಯುವ ಸದಾವಕಾಶ ಇದಾಗಿದೆ. ಆಸಕ್ತ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಳ್ಳಬಹುದು. ಏವಿಯೇಷನ್ & ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಡಿಪ್ಲೊಮ ಇನ್ ಏರ್ ಲೈನ್ ಮ್ಯಾನೇಜ್ಮೆಂಟ್, ಕ್ಯಾಬಿನ್ ಕ್ರ್ಯೂ/ಏರ್ ಹೋಸ್ಟೆಸ್, ಲಾಜಿಸ್ಟಿಕ್ ಮ್ಯಾನೇಜ್ಮೆಂಟ್ ಹೀಗೆ ಹಲವಾರು ತರಬೇತಿಗಳನ್ನು ನುರಿತ ತರಬೇತುದಾರರು ನೀಡಲಿದ್ದಾರೆ.