ನ್ಯೂಸ್ ನಾಟೌಟ್: ಬಂಟ್ವಾಳದಿಂದ ನಾಪತ್ತೆಯಾಗಿದ್ದ ವೃದ್ಧರೊಬ್ಬರು ಉಳ್ಳಾಲದ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಸಜೀಪ ಮುನ್ನೂರು ಗ್ರಾಮದ ನಾಗನವಳಚ್ಚಿಲ್ ನಿವಾಸಿ ಉಗ್ಗಪ್ಪ ಪೂಜಾರಿ (70) ಎಂದು ಗುರುತಿಸಲಾಗಿದೆ.
ಉಗ್ಗಪ್ಪ ಪೂಜಾರಿ ಅವರು ನ. 5ರಂದು ಪಾಣೆಮಂಗಳೂರಿನ ಬ್ಯಾಂಕ್ಗೆ ಹೋಗಿ ತನ್ನ ವೃದ್ಧಾಪ್ಯ ವೇತನ ಪಡೆದುಕೊಂಡು ವಾಪಸ್ಸು ಮನೆಗೆ ಬಂದಿದ್ದರು. ಬಳಿಕ ತನ್ನ ಸೊಸೆಗೆ ಕರೆ ಮಾಡಿ ಏನು ವಿಷಯವನ್ನು ತಿಳಿಸಲು ಯತ್ನಿಸಿ ಕರೆ ಕಟ್ ಮಾಡಿದ್ದರು. ಬಳಿಕ ಸೊಸೆ ತಿರುಗಿ ಪೋನ್ ಮಾಡಿದಾಗ ಪೋನ್ ಸ್ವೀಕರಿಸದೆ ನಾಪತ್ತೆಯಾಗಿದ್ದರು. ಉಗ್ಗಪ್ಪ ಅವರು ಮೊಬೈಲ್ ಕೂಡ ಮನೆಯಲ್ಲೇ ಬಿಟ್ಟು ಹೋಗಿದ್ದರು. ಎಲ್ಲ ಕಡೆ ಉಗ್ಗಪ್ಪ ಅವರನ್ನು ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಪುತ್ರ ಅನಿಲ್ ಕುಮಾರ್ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ ಅದೇ ದಿನ ಉಳ್ಳಾಲ ರೈಲು ಹಳಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಅದರ ವಾರಸುದಾರರು ಸಿಗದೆ ಶವವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಗುರುವಾರ ಉಗ್ಗಪ್ಪ ಅವರ ಮನೆಯವರು ಬಂದು ಮೃತದೇಹವನ್ನು ಅವರದ್ದೇ ಎಂದು ಖಚಿತಪಡಿಸಿದ್ದಾರೆ. ಈ ಬಗ್ಗೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.