ನ್ಯೂಸ್ ನಾಟೌಟ್: ಅರಂತೋಡು-ಎಲಿಮಲೆ ರಸ್ತೆ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಒಮ್ಮೆ ಸದ್ದಾಯಿತು, ಅದಾದ ಬಳಿಕ ಅಲ್ಲಿಗೇ ತಣ್ಣಗಾಯಿತು. ಇದೀಗ ಮತ್ತೊಮ್ಮೆ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಇತ್ತೀಚೆಗೆ ಉಬರಡ್ಕದ ಇಕ್ಕಟ್ಟಿನ ರಸ್ತೆಯಲ್ಲಿ ಹೆಣ್ಣು ಮಗುವಿನ ಜೀವವೊಂದು ರಸ್ತೆ ಅಪಘಾತಕ್ಕೆ ಬಲಿಯಾಯಿತು. ಪೂರ್ವಯೋಜನೆ ಇಲ್ಲದೆ ರಸ್ತೆಗಳ ನಿರ್ಮಾಣವೇ ಅಪಘಾತಕ್ಕೆ ಕಾರಣ ಅನ್ನುವ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಅದೇ ರೀತಿಯಲ್ಲಿರುವ ಮತ್ತೊಂದು ಅಪಾಯಕಾರಿ ರಸ್ತೆ ಎಂದರೆ ಅದು ಅರಂತೋಡು-ಎಲಿಮಲೆ ಸಾಗುವ ಅಂಕುಡೊಂಕಿನ ರಸ್ತೆ. ಇದನ್ನು ಸರಿಪಡಿಸಬೇಕೆಂದು ಈ ಹಿಂದೆಯೇ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಮತದಾನ ಬಹಿಷ್ಕಾರದ ಆಕ್ರೋಶ ಸಿಡಿದಿತ್ತು. ಚುನಾವಣೆಯ ಸಮಯ ರಿಸ್ಕ್ ಬೇಡ ಅಂತ ಸ್ವಲ್ಪ ದೂರದ ತನಕ ಡಾಂಬರೀಕರಣ ಮಾಡಲಾಗಿತ್ತು. ಅಡ್ತಲೆ ನಾಗರಿಕ ಹಿತ ರಕ್ಷಣಾ ವೇದಿಕೆಗೆ ಮುಂದಿನ ದಿನಗಳಲ್ಲಿ ಅಡ್ತಲೆ ತನಕ ರಸ್ತೆ ಮಾಡಿಕೊಡಲಾಗುವುದು ಅನ್ನುವ ಭರವಸೆ ನೀಡಲಾಗಿತ್ತು. ಆದರೆ ಕೊಟ್ಟ ಭರವಸೆ 2 ವರ್ಷವಾಗುತ್ತಾ ಬಂದರೂ ಇದುವರೆಗೆ ಈಡೇರಿಲ್ಲ.
ಹೀಗಾಗಿ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯವರು ಸುಳ್ಯ ಶಾಸಕರಿಗೆ, ತಹಶೀಲ್ದಾರ್ ರಿಗೆ, ಲೋಕೋಪಯೋಗಿ ಇಲಾಖೆಯವರಿಗೆ ಮನವಿ ಸಲ್ಲಿಸಿ ಕೂಡಲೇ ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವ ವಾಹನಗಳು ಇದೇ ಭಾಗದಿಂದ ತೆರಳುತ್ತಿವೆ. ದೂರದ ಊರಿನ ಚಾಲಕರಿಗೆ ಈ ತಿರುವುಗಳ ಬಗ್ಗೆ ಮಾಹಿತಿ ಇಲ್ಲ. ತಿರುವುಗಳಲ್ಲಿ ಸರಿಯಾಗಿ ಸೈಡ್ ಕೊಡುವುದಕ್ಕೂ ಜಾಗವಿಲ್ಲ. ತೀರ ಇಕ್ಕಟ್ಟಿನ ಜಾಗ, ಹೀಗಾಗಿ ಇದನ್ನು ಸರಿಪಡಿಸಲೇ ಬೇಕಾಗಿದೆ. ಒಳ್ಳೆಯ ನಿರ್ಧಾರದಿಂದ ಒಂದಷ್ಟು ಜೀವಗಳನ್ನು ಉಳಿಸಬಹುದು, ಅಪಾಯವಾಗುವ ಮೊದಲೇ ಜನನಾಯಕರೇ ಎಚ್ಚೆತ್ತುಕೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಕೆ ಸಂದರ್ಭ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಭವಾನಿಶಂಕರ ಅಡ್ತಲೆ, ರಂಜಿತ್ ಅಡ್ತಲೆ , ಕೇಶವ ಮೇಲಡ್ತಲೆ, ಮೋಹನ್ ಪಂಜದ ಬೈಲ್ ಹಾಜರಿದ್ದರು.