ನ್ಯೂಸ್ ನಾಟೌಟ್: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಸೇರಿ ವಿವಿಧ ಮೂಲಸೌಕರ್ಯ ಕಲ್ಪಿಸಲು ಬಿಡುಗಡೆಯಾಗಿರುವ ಅನುದಾನವನ್ನು 18 ಮಂದಿ ಐಎಎಸ್ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ.
ಇವರೆಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ನೀಡಿದ್ದಾರೆ.
2013-14ನೇ ಸಾಲಿನಿಂದ 2023-24ರ ಅವಧಿಯ ಹತ್ತು ವರ್ಷದಲ್ಲಿ ಪಾಲಿಕೆಯ ರಸ್ತೆಗಳ ಅಭಿವೃದ್ಧಿಗೆ 46,300 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಶೇ.75 ಹಣ ದುರ್ಬಳಕೆಯಾಗಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ 4,113 ಪುಟಗಳ ದಾಖಲೆ ಹೊಂದಿರುವ ಸಿ.ಡಿ.ಯನ್ನು ಇಡಿಗೆ ಸಲ್ಲಿಸಲಾಗಿದೆ.
ದೂರಿನಲ್ಲಿ ಬಿಬಿಎಂಪಿಯ ಹಾಲಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 8 ವಲಯಗಳ ವಲಯ ಆಯುಕ್ತರು ಸೇರಿ ಕಳೆದ 10 ವರ್ಷದಲ್ಲಿ ಪಾಲಿಕೆಯ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿರುವ 18 ಐಎಎಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಇವರೆಲ್ಲರ ವಿರುದ್ಧ ಸಾರ್ವಜನಿಕರ ಹಣ ದುರ್ಬಳಕೆ, ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಪ್ರಕರಣ ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.
Click