ನ್ಯೂಸ್ ನಾಟೌಟ್: ಮಹಾರಾಷ್ಟ್ರದ ಮಾಜಿ ಸಚಿವ, ಹಿರಿಯ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿದ್ದು, ಬಂಧಿತ ಆರೋಪಿಗಳು ಯೂಟ್ಯೂಬ್ ನೋಡಿ ಹತ್ಯೆಗಾಗಿ ಶೂಟಿಂಗ್ ತರಬೇತಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾತನಾಡಿ, ಆರೋಪಿಗಳು ಮೂರು ತಿಂಗಳ ಹಿಂದೆಯೇ ಪುಣೆಯಲ್ಲಿ ಬಾಬಾ ಸಿದ್ದಿಕಿ ಹತ್ಯೆಗೆ ಯೋಜನೆ ರೂಪಿಸಿದ್ದರು. ಆದರೆ ಅದು ಯಶಸ್ವಿಯಾಗಿರಲಿಲ್ಲ. ಬಳಿಕ ಮುಂಬೈನಲ್ಲಿ ಹತ್ಯೆಗೆ ಪ್ಲ್ಯಾನ್ ಮಾಡಿ, ಕಳೆದ ಶನಿವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಆರು ಸುತ್ತು ಗುಂಡು ಹಾರಿಸಿದ್ದರು ಎಂದು ತಿಳಿಸಿದ್ದಾರೆ.
ಹಂತಕರು ಯೂಟ್ಯೂಬ್ ನಿಂದ ಶೂಟ್ ಮಾಡುವುದು ಹೇಗೆಂದು ಕಲಿತಿದ್ದರು. ಅಷ್ಟೇ ಅಲ್ಲದೇ ಈ ಕುರಿತು ಸ್ನ್ಯಾಪ್ಚಾಟ್ ಮತ್ತು ಇನ್ಸ್ಟಾಗ್ರಾಂನಲ್ಲಿ ಮಾತ್ರ ಪರಸ್ಪರ ಸಂವಹನ ನಡೆಸುತ್ತಿದ್ದರು. ಸದ್ಯ ಪೊಲೀಸರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಅಧಿಕಾರಿಗಳಿಂದ ಪೋಸ್ಟ್ ಕುರಿತು ಹೆಚ್ಚಿನ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ಹಲವು ಸಾಕ್ಷಿಗಳನ್ನು ಒಳಗೊಂಡಿರುವ ಈ ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್ ಇದುವರೆಗೆ 15ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
Click