ಯಶ್ ನಟನೆಯ ಸಿನಿಮಾಕ್ಕಾಗಿ ನೂರಾರು ಮರಗಳ ನಾಶ..? ಅರಣ್ಯ ಸಚಿವ ಈಶ್ವರ್‌ ಖಂಡ್ರೆಯ ಆರೋಪಕ್ಕೆ ಚಿತ್ರತಂಡ ಹೇಳಿದ್ದೇನು..?

ನ್ಯೂಸ್ ನಾಟೌಟ್: ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಸೆಟ್‌ ಗಾಗಿ ನೂರಾರು ಮರಗಳನ್ನು ನಾಶ ಮಾಡಿರುವ ಆರೋಪ ಕೇಳಿ ಬಂದಿದ್ದು, ಆರೋಪದ ಬೆನ್ನಲ್ಲೇ ಸ್ಥಳ ಪರಿಶೀಲನೆ ನಡೆಸಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಹೆಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಲಾಗಿದೆ ಎಂಬ ಆರೋಪವನ್ನು ಖುದ್ದು ಅರಣ್ಯ ಸಚಿವರೇ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರ್ ಖಂಡ್ರೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ವೊಂದನ್ನ ಹಂಚಿಕೊಂಡಿದ್ದಾರೆ. ಸ್ಯಾಟಲೈಟ್‌ ಫೋಟೋಗಳನ್ನ ಪಡೆದು ಪರಿಶೀಲಿಸುತ್ತಿರುವ ಸಚಿವರು, ಚಿತ್ರೀಕರಣ ಸೆಟ್‌ ಹಾಕಿದ್ದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಸಚಿವರ ಆರೋಪಕ್ಕೆ ಚಿತ್ರತಂಡವೂ ಸ್ಪಷ್ಟನೆ ಕೊಟ್ಟಿದೆ. ಸೆಟ್ ಹಾಕಲು ಅನುಮತಿ ಕರಾರು ಪತ್ರಕ್ಕೆ ಸಹಿ ಹಾಕೋಕೂ ಮುನ್ನ ತೆಗೆದ ಸ್ಯಾಟಲೈಟ್‌ ಪಿಕ್ಚರ್ ನಮ್ಮ ಬಳಿಯೂ ಇದೆ. 2022ರಲ್ಲೇ ದಾಖಲಾದ ಸ್ಯಾಟಲೈಟ್ ಫೋಟೋ ಸಾಕ್ಷ್ಯ ಇದೆ ಎಂದು ಹೇಳಿದೆ.