ಪುತ್ತೂರು: ವಿಶ್ವ ಹಿಂದೂ ಪರಿಷತ್ ಮತ್ತು ಪುತ್ತಿಲ ಪರಿವಾರದ ನಡುವೆ ಜಟಾಪಟಿ..! ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲರನ್ನು ತಡೆದ ಹಿಂದೂ ಕಾರ್ಯಕರ್ತರು..! ಮುಂದೇನಾಯ್ತು..?

ನ್ಯೂಸ್ ನಾಟೌಟ್ : ವಿಶ್ವ ಹಿಂದೂ ಪರಿಷತ್ ನ (Vishwa Hindu Parishad) ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ (Puthila Parivara) ಹಾಗೂ ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು ಕೈ ಕೈ ಮಿಲಾಯಿಸಿರುವ ಘಟನೆ ಇಂದು(ಅ.23) ನಡೆದಿದೆ.  ಪುತ್ತೂರಿನ ಎಸ್ ಡಿಸಿಸಿ ಬ್ಯಾಂಕ್ ಮುಂಭಾಗದ ಈ ಹಿಂದಿನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯವಿದ್ದ ಸ್ಥಳದಲ್ಲಿ ಇಂದು(ಬುಧವಾರ) ಶಿಲಾನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವಾಗಿ ಪುತ್ತಿಲ ಪರಿವಾರದ ಹೆಸರಿನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಸಹಿತ ಅವರ ಬೆಂಗಲಿಗರು ಕಾರಿನಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಹಿಂದೂ ಜಾಗರಣೆ ವೇದಿಕೆಯ ಕೆಲ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದ ಪುತ್ತಿಲರನ್ನು ತಡೆದರು. ಈ ವೇಳೆ ಪುತ್ತಿಲರ ಜತೆಗಿದ್ದವರು ಪುತ್ತಿಲರ ನೆರವಿಗೆ ಧಾವಿಸಿದ ಕಾರಣ, ಎರಡು ತಂಡಗಳ ನಡುವೆ ವಾಗ್ವಾದ ನಡೆಸಿದ್ದಾರೆ, ಜೊತೆಗೆ ಗಲಾಟೆ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು ಎನ್ನಲಾಗಿದೆ. ಈ ಹಿಂದೆ ಪುತ್ತಿಲ ಸ್ವತಂತ್ರ ಅಭ್ಯರ್ಥಿಯಾಗಿ ಬಂಡಾಯವಾಗಿ ಚುನಾವಣೆಗೆ ನಿಂತಾಗ ವಿಹಿಂಪ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಅಸಮಾಧಾನ ಈ ಜಟಾಪಟಿಗೆ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಂಘ ಪರಿವಾರದ ಹಿರಿಯ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಅರುಣ್ ಕುಮಾರ್ ಪುತ್ತಿಲರನ್ನು ವೇದಿಕೆಯತ್ತ ಕರೆದೊಯ್ದರು. ಪುತ್ತಿಲ ಕೆಲ ಹೊತ್ತು ಸಭೆಯಲ್ಲಿ ಉಪಸ್ಥಿತರಿದ್ದು ಬಳಿಕ ಅಲ್ಲಿಂದ ನಿರ್ಗಮಿಸಿದರು ಎನ್ನಲಾಗಿದೆ.