ನ್ಯೂಸ್ ನಾಟೌಟ್: ಮಗನ ಹುಟ್ಟು ಹಬ್ಬದಲ್ಲಿ ತಿಂದು ತೇಗುವುದಕ್ಕಾಗಿ ಕಡವೆಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸವನ್ನು ಫ್ರೀಝರ್ ನಲ್ಲಿಟ್ಟಿದ್ದ ಘಟನೆಯೊಂದು ಉಪ್ಪಿನಂಗಡಿಯಿಂದ ವರದಿಯಾಗಿದೆ. ಸದ್ಯ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್ ಮತ್ತವರ ಸಹವರ್ತಿಗಳು ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಅದನ್ನು ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆಂದು ಮಾಂಸ ಮಾಡಿ ಮನೆಯ ಪ್ರೀಝರ್ ನಲ್ಲಿ ಇರಿಸಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬಂದಿ ಸುನಿಲ್, ಶಿವಾನಂದ ಅವರ ತಂಡ ಸುರೇಶ್ ಮನೆಗೆ ದಾಳಿ ನಡೆಸಿದರು. ಸಂಗ್ರಹಿಸಿಟ್ಟ ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ವಶಪಡಿಸಿಕೊಂಡರು. ಬಳಿಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟುವ ಮೂಲಕ ಪರಾರಿಯಾಗಿದ್ದಾರೆ. ವಲಯಾಧಿಕಾರಿಯಿಂದ ತನಿಖೆ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿ ರಾಘವೇಂದ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.