ಪಾರಿವಾಳ ಹಾರಿಸಿ ಮನೆಯಲ್ಲಿದ್ದ ಚಿನ್ನ-ಹಣ ಕದಿಯುತ್ತಿದ್ದ ವಿಚಿತ್ರ ಕಳ್ಳ..! 30ಕ್ಕೂ ಅಧಿಕ ಮನೆ ಕಳವು..!

ನ್ಯೂಸ್ ನಾಟೌಟ್: ಬೀಗ ಹಾಕಿದ ಮನೆಗಳನ್ನು ಪಾರಿವಾಳದ ಮೂಲಕ ಗುರುತಿಸಿ ರಾತ್ರಿ ವೇಳೆ ಬೀಗ ಒಡೆದು ಕಳವು ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಗಳರಪೇಟೆ ನಿವಾಸಿ ಮಂಜುನಾಥ್‌ ಅಲಿಯಾಸ್‌ ಪಾರಿವಾಳ ಮಂಜ(39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 475 ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳ ಜಪ್ತಿ ಮಾಡಲಾಗಿದೆ. ಆರೋಪಿಯು ಆರಂಭದಲ್ಲಿ ಕಟ್ಟಡಗಳ ಮೇಲೆ ನಿಂತು ಪರಿವಾಳ ಹಾರಿಸುತ್ತಿದ್ದ. ಬಳಿಕ ಪರಿವಾಳ ಹಿಡಿದುಕೊಳ್ಳುವ ನೆಪದಲ್ಲಿ ಬೀಗ ಹಾಕಿದ ಮನೆಗಳ ಬೀಗ ಮುರಿದು ಕಳವು ಮಾಡಿ ಪರಾರಿಯಾಗುತ್ತಿದ್ದ. ಹೀಗಾಗಿ ಈತನನ್ನು ಪಾರಿವಾಳ ಮಂಜ ಎಂದೂ ಕರೆಯಲಾಗುತ್ತಿತ್ತು. ಇದೇ ಪಾರಿವಾಳದ ನೆಪದಲ್ಲಿ ಹಗಲಿನಲ್ಲಿ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ. ಕದ್ದ ಮಾಲುಗಳನ್ನು ವಿವಿಧ ಜ್ಯುವೆಲ್ಲರಿ ಅಂಗಡಿಗಳಲ್ಲಿ ವಿಲೇವಾರಿ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ ಎನ್ನಲಾಗಿದೆ. ಚಿಕ್ಕಪೇಟೆ ನಿವಾಸಿ ಉಪೇಶ್‌ ಭಂಡಾರಿ ಎಂಬುವರು ಮನೆಯ ಬೀಗ ಹಾಕಿಕೊಂಡು ಕಾರ್ಯನಿಮಿತ್ತ ಊರಿಗೆ ಹೋಗಿದ್ದರು. ಕಳೆದ ಏ. 5ರಂದು ವಾಪಸ್‌ ಬಂದಾಗ ಮನೆಯ ಬೀಗ ಮುರಿದು ಕಳವು ಮಾಡಿರುವುದು ಗೊತ್ತಾಗಿದೆ. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಆರೋಪಿ ಮಂಜುನಾಥ ವೃತ್ತಿಪರ ಕಳ್ಳನಾಗಿದ್ದು, ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ ಎನ್ನಲಾಗಿದೆ.. ಈತನ ವಿರುದ್ಧ ಸುಮಾರು 30ಕ್ಕೂ ಅಧಿಕ ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲಿಗೆ ಹೋಗಿ, ಜಾಮೀನು ಪಡೆದು ಹೊರಗೆ ಬಂದರೂ, ಮತ್ತೆ ತನ್ನ ಕಳವು ಚಾಳಿ ಮುಂದುವರಿಸುತ್ತಿದ್ದ ಎನ್ನಲಾಗಿದೆ. Click