ನ್ಯೂಸ್ ನಾಟೌಟ್: ಮಗ ಸತ್ತಿದ್ದಾನೆಂದು ತಿಳಿಯದೇ ೪ ದಿನಗಳಿಂದ ದಂಪತಿ ಹೆಣದ ಜತೆ ಕಾಲ ಕಳೆದ ದಾರುಣ ಘಟನೆ ಬಗ್ಗೆ ವರದಿಯಾಗಿದೆ.ತೆಲಂಗಾಣದ ನಾಗೋಲ್ನಲ್ಲಿ ಈ ಘಟನೆ ನಡೆದಿದ್ದು,ಬೇಸರ ತರಿಸುವಂತಿದೆ.
ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ರಾತ್ರಿ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಪೋಷಕರು ಕೂಡ ಅಂಧರಾಗಿದ್ದರಿಂದ ಅವರಿಗೆ ತಮ್ಮ ಮಗನ ಸಾವಿನ ಬಗ್ಗೆ ತಿಳಿಯಲೇ ಇಲ್ಲ.ಹೀಗಾಗಿ ನಾಲ್ಕು ದಿನಗಳ ನಂತರ ನೆರೆಹೊರೆಯವರು ದುರ್ವಾಸನೆ ಅನುಭವಿಸಿದ ನಂತರ ಈ ಘಟನೆ ಬಗ್ಗೆ ಗೊತ್ತಾಗಿದೆ.ಅಂಧ ದಂಪತಿಗಳಾದ ಕೆ. ರಮಣ ಮತ್ತು ಕೆ. ಶಾಂತಾ ಕುಮಾರಿ ಅವರಿಗೆ 4 ದಿನಗಳ ಹಿಂದೆ ಅವರ ಮಗ ಪ್ರಮೋದ್ ರಾತ್ರಿ ಊಟ ಬಡಿಸಿದ್ದರು. ನಂತರ ಮಗ ಮಲಗಿದ್ದ ಎನ್ನಲಾಗಿದೆ. ದುರದೃಷ್ಟವಶಾತ್, ಆತ ನಿದ್ರೆ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ್ದ. ಆದರೆ, ಅವರಿಗೆ ಕಣ್ಣು ಕಾಣುತ್ತಿಲ್ಲವಾದ್ದರಿಂದ ಮಗ ತೀರಿಕೊಂಡಿದ್ದಾನೆ ಎಂಬ ಸಣ್ಣ ಸೂಚನೆಯೂ ಅವರ ಅರಿವಿಗೆ ಬಂದಿರಲಿಲ್ಲ.
ನೆರೆಹೊರೆಯವರು ದಂಪತಿಯ ಮನೆಗೆ 4 ದಿನಗಳ ನಂತರ ಪ್ರವೇಶ ಮಾಡುತ್ತಾರೆ. ಪೋಲೀಸ್ ಅಧಿಕಾರಿಯ ಪ್ರಕಾರ, ತಮ್ಮ ಮಗನ ಸಾವಿನ ಬಗ್ಗೆ ತಿಳಿದ ನಂತರ, ಪೋಷಕರು ಆಘಾತಕ್ಕೊಳಗಾದರು. ಅಲ್ಲದೆ ಮಗ ಊಟ ಬಡಿಸಿದ ಬಳಿಕ 4 ದಿನಗಳ ಕಾಲ ಅವರು ಆಹಾರ ಅಥವಾ ನೀರು ಏನೂ ಸೇವಿಸದೆ ರೂಂನಲ್ಲೇ ಇದ್ದರು ಎನ್ನಲಾಗಿದೆ. ಅವರ ಸ್ಥಿತಿ ಕೈಕಾಲು ಕೂಡ ಚಲಿಸಲಾರದಂತಾಗಿತ್ತು.ನಾಲ್ಕು ದಿನಗಳ ನಂತರ, ಮನೆಯಿಂದ ದುರ್ವಾಸನೆ ಬಂದಿದ್ದು, ಇದೇನು ಇಷ್ಟೊಂದು ವಾಸನೆ ಬರತ್ತಿದೆಯಲ್ವ ಎನ್ನುತ್ತಾ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡ ಒಳಪ್ರವೇಶಿಸಿದ ಪೊಲೀಸರು ದಂಪತಿ ಬಾಯಿಯಿಂದ ನೊರೆ ಬರುತ್ತಿದ್ದುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆ ಮನೆಯಲ್ಲಿ ಮಗನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಂತರ ಪೊಲೀಸ್ ಅಧಿಕಾರಿಗಳು ದುಃಖಿತ ದಂಪತಿಗಳಿಗೆ ಸ್ನಾನ ಮಾಡಿಸಿ, ಆಹಾರ ಮತ್ತು ನೀರನ್ನು ತಿನ್ನಿಸಿದ್ದಾರೆ. ಸರೂರ್ನಗರದಲ್ಲಿ ವಾಸಿಸುವ ಅವರ ಹಿರಿಯ ಮಗನಿಗೂ ಮಾಹಿತಿ ನೀಡಿದ್ದಾರೆ. ಮೃತನ ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.