ನ್ಯೂಸ್ ನಾಟೌಟ್: ನಮ್ಮ ಪೊಲೀಸರು ಮನಸ್ಸು ಮಾಡಿದರೆ ಅದೆಂಥಹ ಕಠಿಣ ಪ್ರಕರಣವನ್ನೂ ಭೇದಿಸಬಲ್ಲರು, ಆರೋಪಿ ಪಾತಾಳದಲ್ಲಿದ್ದರೂ ಹುಡುಕಿತರಬಲ್ಲರು ಅನ್ನೋದು ಮತ್ತೊಮ್ಮೆ ನಿರೂಪಿತವಾಗಿದೆ.
ಇತ್ತೀಚೆಗೆ ಸುಳ್ಯದ ಸರ್ಕಾರಿ ಆಸ್ಪತ್ರೆಯಿಂದ ಕಳ್ಳನೊಬ್ಬ ಪೊಲೀಸರ ಕೈನಿಂದ ಮಹಾ ಮೋಸ ಮಾಡಿ ತಪ್ಪಿಸಿಕೊಂಡಿದ್ದ ತಮಿಳುನಾಡಿನ ರಾಘವನ್ ಕೆಜೀಶ್ವರನ್ ಅಲಿಯಾಸ್ ಕೂಲಿ ಕರಣ್ (25 ವರ್ಷ) ಆತನಿಗಾಗಿ ಎಲ್ಲ ಕಡೆಯೂ ಹುಡುಕಾಟ ನಡೆದಿತ್ತು. ಸುಳ್ಯ ಸುತ್ತಮುತ್ತಲಿನ ಕಾಡುಮೇಡು ಅಲೆದು ಪೊಲೀಸರು ಸುಸ್ತಾಗಿದ್ದರು. ಅಷ್ಟರಲ್ಲಿ ಕೆಲವು ಮಾಧ್ಯಮಗಳಲ್ಲೂ ವರದಿ ಬಿತ್ತರಗೊಂಡು ಪೊಲೀಸರು ತೀವ್ರ ಮುಜುಗರಕ್ಕೊಳಗಾಗಿದ್ದರು. ಈ ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ ಪಿ ಪುತ್ತೂರು, ಸಿಪಿಐ ಸುಳ್ಯ ಗಂಭೀರವಾಗಿ ತೆಗೆದುಕೊಂಡಿದ್ದರು. ಸುಳ್ಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಹಾಗೂ ಕ್ರೈಂ ಪಿಸಿಐ ಸರಸ್ವತಿ ಅವರಿಗೆ ತಕ್ಷಣ ಆರೋಪಿಯ ಹೆಡೆಮುರಿ ಕಟ್ಟುವಂತೆ ಸೂಚನೆ ನೀಡಿದ್ದರು.
ಈ ಪ್ರಕಾರವಾಗಿ ಸಂತೋಷ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ತಂಡ ರಚಿತವಾಯಿತು. ಕೆಲವು ತಿಂಗಳ ಹಿಂದೆಯಷ್ಟೇ ಸುಳ್ಯಕ್ಕೆ ಪದಾರ್ಪಣೆ ಮಾಡಿರುವ ಸಂತೋಷ್ ಅವರು ಸುಳ್ಯ ಪೊಲೀಸ್ ಠಾಣೆಯ ಮೇಲೆ ಅಂಟಿಕೊಂಡಿದ್ದ ಈ ಅವಮಾನ ತೊಳೆಯುವುದಕ್ಕೆ ಟೊಂಕಕಟ್ಟಿ ನಿಂತರು. ವಿಶೇಷ ತಂಡ ರಚಿಸಿ ಕಳ್ಳನನ್ನು ಹಿಡಿಯುವುದಕ್ಕೆ ತಂತ್ರ ರೂಪಿಸಿದರು. ತಮಿಳುನಾಡು ಮೂಲದ ಕಳ್ಳ ಸುಳ್ಯದಿಂದ ನೇರವಾಗಿ ತಮಿಳುನಾಡಿಗೆ ಹೋಗಿರುವ ಬಗ್ಗೆ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು.
ಈ ಪ್ರಕಾರವಾಗಿ ಸುಳ್ಯದ ಪೊಲೀಸರ ತಂಡ ತಮಿಳುನಾಡಿಗೆ ತೆರಳಿತ್ತು. ಒಂದು ವಾರಗಳ ಕಾಲ ಎಲ್ಲಿ ಹುಡುಕಿದರೂ ಕಳ್ಳನ ಸುಳಿವು ಸಿಕ್ಕಿರಲಿಲ್ಲ. ವಾಪಸ್ ಬರುವುದಕ್ಕೂ ಆಗದೆ ಅಲ್ಲಿಯೇ ಉಳಿದುಕೊಳ್ಳುವುದಕ್ಕೂ ಆಗದೆ ಪೊಲೀಸರು ತೀವ್ರ ಇಕ್ಕಟ್ಟಿಗೆ ಸಿಲುಕಿದ್ದರು. ಈ ವೇಳೆ ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಿದಂತೆ ಪೊಲೀಸರಿಗೆ ಅಲ್ಲಿನ ಸ್ಥಳೀಯರಿಂದ ಒಂದಷ್ಟು ಮಹತ್ವದ ಮಾಹಿತಿ ಸಿಕ್ಕಿತ್ತು. ಇಷ್ಟು ಗೊತ್ತಾದ ಮೇಲೆ ಬೆರಳು ಕಂಡರೆ ಇಡೀ ಹಸ್ತವನ್ನೇ ನುಂಗುವ ಸ್ವಭಾವ ಇರುವ ಪೊಲೀಸರು ಸುಮ್ಮನೆ ಬಿಡುತ್ತಾರಾ..? ಕಳ್ಳನ ಜನ್ಮ ಜಾತಕವನ್ನು ಸರಿಯಾಗಿಯೇ ಜಾಲಾಡುತ್ತಾರೆ. ಆಗ ಸಿಕ್ಕಿಬಿದ್ದ ನೋಡಿ ಈ ಕಳ್ಳ, ತಲೆಕೂದಲನ್ನು ನುಣ್ಣಗೆ ಬೋಳಿಸಿಕೊಂಡು ಹಾಯಾಗಿ ತಿರುಗಾಟ ನಡೆಸುತ್ತಿದ್ದ ಅವನಿಗೆ ಅಲ್ಲೆ ಎರಡು ಬಿಗಿದು ಠಾಣೆಗೆ ಎಳೆದು ತಂದಿದ್ದಾರೆ.
ಅ.೫ ರಂದು ಪೊಲೀಸರು ಆತನನ್ನು ಸಂಪಾಜೆಯ ಅಂಬರೀಶ್ ಭಟ್ಟರ ಮನೆಯ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದರು, ನಿಯಮ ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ವೈದ್ಯಕೀಯ ತಪಾಸಣೆ ನಡೆಸಬೇಕು, ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಕರೆದುಕೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಆತ ಪೊಲೀಸರನ್ನೇ ದೂಡಿ ಹಾಕಿ ಪರಾರಿಯಾಗಿದ್ದ. ಒಂದು ಕೇಸ್ ನ ವಿಚಾರಣೆಯಲ್ಲಿದ್ದ ಆತನ ಮೇಲೆ ಇದೀಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸ್ ದಾಖಲಾಗಿದೆ. ಶನಿವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.