ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸಣ್ಣ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಸಾವೇ ಅಂತಿಮ ಪರಿಹಾರ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿಬಿಟ್ಟಿದೆ. ಇದಕ್ಕೆಲ್ಲ ಕಾರಣ ಏನು ಅನ್ನೋದನ್ನು ಯೋಚಿಸಬೇಕಿದೆ. ಯಾವುದೇ ಒಂದು ವಿಚಾರವನ್ನು ಪರಾಮರ್ಶಿಸದೆ ತೀರ್ಮಾನಕ್ಕೆ ಬರಬಾರದು. ಖಿನ್ನತೆಯಿಂದ ತೆಗೆದುಕೊಂಡ ನಿರ್ಧಾರ ನಿಮ್ಮನ್ನು ಹಾಗೂ ನಿಮ್ಮ ನಂಬಿದ ಸಂಸಾರವನ್ನು ಬೀದಿಗೆ ಬೀಳಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ. ಹಾಗಾಗಿ ಸಾವಿಗೆ ಶರಣಾಗುವ ಮೊದಲು ವಿಚಾರವಂತರಾಗಿ ಯೋಚಿಸಬೇಕು. ಈ ಬಗ್ಗೆ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮನೋವೈದ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಆಗಿರುವ ಡಾ|ಪೂನಂ ಬರೆದ ಅಂಕಣದ ಸಾರಂಶ ಇಲ್ಲಿದೆ ಓದಿ.
ಪ್ರತಿ ವರ್ಷ ಪ್ರಪಂಚದಾದ್ಯಂತ 7,00,000 ಕ್ಕಿಂತ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಆತಂಕಕಾರಿ ಸಂಗತಿ. ಭಾರತದಲ್ಲಿ ಅತೀ ಹೆಚ್ಚು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚು ಆತ್ಮಹತ್ಯೆಗೆ ಪ್ರಯತ್ನಿಸುವುದು ಹಾಗೂ ಎಷ್ಟೋ ಪಟ್ಟು ಹೆಚ್ಚು ಜನರು ಆತ್ಮಹತ್ಯೆಯ ಕುರಿತು ಯೋಚಿಸುತ್ತಾರಂತೆ. ತೀವ್ರವಾದ ವೇದನೆ ಹಾಗೂ ಜಟಿಲ ಸಮಸ್ಯೆಯನ್ನು ಅನುಭವಿಸುತ್ತಿರುವ ಅನೇಕ ಜನರಲ್ಲಿ ಆತ್ಮಹತ್ಯಾ ಮನೋಭಾವ ಇರುತ್ತದೆ. ಇದೊಂದು ಗಂಭೀರ ಮಾನಸಿಕ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ವಿಶ್ವದಾದ್ಯಂತ ಕ್ರಮ ಕೈಗೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಸೆ.10 ರಂದು ಆಚರಿಸಲಾಗುತ್ತದೆ. ಆತ್ಮಹತ್ಯೆಯೇ ಕೊನೆಯಲ್ಲ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವುದು ಮತ್ತು ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಬದುಕಲು ಭರವಸೆಯನ್ನು ತುಂಬುವ ಉದ್ದೇಶದಿಂದ 2023ರಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲು WHO ನಿರ್ಧರಿಸಿತು. ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಕೂಡ ಆಚರಿಸಲು ನಿರ್ಧರಿಸಲಾಗಿದೆ.
ಆತ್ಮಹತ್ಯೆಗೆ ಕಾರಣವಾದ ಅಂಶಗಳು ಯಾವುದು..?
ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು /ಅಘಾತದ ಅನುಭವ, ಕೌಟುಂಬಿಕ ಹಿಂಸೆ, ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು, ಆರ್ಥಿಕ ಸಮಸ್ಯೆ, ಅನಾರೋಗ್ಯ, ಆತಂಕ ಖಿನ್ನತೆ ಅಪರಾಧದಂತಹ ಮಾನಸಿಕ ಆರೋಗ್ಯ ಸಮಸ್ಯೆ, ಒಂಟಿತನ, ಹತಾಶೆ
ಭಯ ಮತ್ತು ವೈಫಲ್ಯದ ಭಾವನೆ, ಸಾಮಾಜಿಕ ಬೆಂಬಲದ ಕೊರತೆ ಇಂತಹ ಹಲವಾರು ಕಾರಣಗಳಿಂದ ಒಬ್ಬ ವ್ಯಕ್ತಿ ತನ್ನನ್ನು ತಾನು ಸಾಯಿಸಲು ಪ್ರಯತ್ನಿಸುವ ಪ್ರಮುಖ ಕಾರಣಗಳಾಗಿವೆ
ಆತ್ಮಹತ್ಯೆ ಯೋಚನೆಯಿಂದ ಹೊರ ಬರುವುದು ಹೇಗೆ..?
ಆತ್ಮಹತ್ಯೆ ಯೋಚನೆ ಬರುವ ಸಂದರ್ಭದಲ್ಲಿ ಅದರಿಂದ ಹೊರಬರಲು ಮೊದಲು ಯೋಚನೆಯನ್ನು ನಡೆಸಬೇಕು.
ನಮ್ಮನ್ನು ಕಾಳಜಿವಹಿಸುವ ಯಾರೊಂದಿಗಾದರೂ ಸಮಸ್ಯೆಯನ್ನು ಹೇಳಿಕೊಳ್ಳುವುದು ಅಥವಾ ಚರ್ಚಿಸುವುದು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಉತ್ತಮ ದಾರಿ. ಸಾಮಾಜಿಕ ಬೆಂಬಲವನ್ನು ನೀಡುವುದು, ಮುಂಚಿತವಾಗಿ ಚಿಹ್ನೆಗಳನ್ನು ಗುರುತಿಸುವ ಮೂಲಕ, ಬೆಂಬಲವನ್ನು ಒದಗಿಸುವ ಮೂಲಕ, ವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಸಹಾನುಭೂತಿಯಿಂದ ಅವರನ್ನು ಸಂಪರ್ಕಿಸುವ ಮೂಲಕ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಿದೆ. ಆತ್ಮಹತ್ಯಾ ಆಲೋಚನೆಗಳು ಮತ್ತು ನಡವಳಿಕೆಗಳ ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸಿ ಹಾಗೂ ಅಂತಹ ವ್ಯಕ್ತಿಯನ್ನು ಅದಷ್ಷು ಸರಿಪಡಿಸುವುದಕ್ಕೆ ಪ್ರಯತ್ನಿಸಬೇಕು.
ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವವರ ವರ್ತನೆ ಹೇಗಿರುತ್ತೆ..?
ಸಾಯುವ ಬಗ್ಗೆಯೇ ಮಾತನಾಡುತ್ತಾರೆ, ತನಗಾದ ಅವಮಾನ ಅಥವಾ ಅಪರಾಧದ ಬಗ್ಗೆ ಮಾತನಾಡುತ್ತಾರೆ. ಇತರರಿಗೆ ಹೊರೆಯಾಗಿದ್ದೇನೆ ಅಥವಾ ತನ್ನನ್ನು ತಾನು ಭಾರವೆಂದು ಪರಿಗಣಿಸಿಕೊಳ್ಳುತ್ತಾರೆ. ಭಾವನೆಗಳಲ್ಲಿ ಬದಲಾವಣೆ, ಖಾಲಿ ಅಥವಾ ಹತಾಶ ಮನೋಭಾವನೆ ಹಾಗೂ ಬದುಕಲು ಯಾವುದೇ ಕಾರಣವಿಲ್ಲ ಎಂಬಂತಹ ಭಾವನೆ, ಹೆಚ್ಚು ದುಃಖ, ಆತಂಕ ಅಥವಾ ಕೋಪದಿಂದ ತುಂಬಿದ ಭಾವನೆ ಹಾಗೂ ಸಹಿಸಲಾಗದ ಭಾವನಾತ್ಮಕ ಅಥವಾ ದೈಹಿಕ ನೋವು ಇರುತ್ತದೆ.
ವರ್ತನೆಯಲ್ಲಿನ ಕೆಲವು ಬದಲಾವಣೆಗಳು ಕಂಡು ಬರುತ್ತದೆ. ಆತ್ಮಹತ್ಯೆಗೆ ಯೋಚನೆಯನ್ನು ರೂಪಿಸುವುದು, ಸ್ನೇಹಿತರಿಂದ ದೂರ ಉಳಿಯುವುದು, ವಿದಾಯ ಹೇಳುವುದು, ಅಮೂಲ್ಯವಾದ ಅಥವಾ ಬೆಲೆಬಾಳುವ ಆಸ್ತಿಯನ್ನು ನೀಡುವುದು ಅಥವಾ ಉಯಿಲು ಮಾಡುವುದು, ತೀವ್ರ ಮನಸ್ಥಿತಿಯ ಬದಲಾವಣೆಗಳನ್ನು ಪ್ರದರ್ಶಿಸುವುದು, ಇದ್ದಕ್ಕಿದ್ದಂತೆ ದುಃಖದಿಂದ ತುಂಬಾ ಶಾಂತ ಅಥವಾ ಸಂತೋಷಕ್ಕೆ ಬದಲಾಗುವುದು, ಅಜಾಗರೂಕತೆ ಅಥವಾ ಹಠಾತ್ ಪ್ರವೃತ್ತಿ, ಸಾವಿಗೆ ಕಾರಣವಾಗುವ ಅಪಾಯಗಳನ್ನು ತೆಗೆದುಕೊಳ್ಳುವುದು, ಉದಾಹರಣೆಗೆ ಅತ್ಯಂತ ವೇಗವಾಗಿ ಚಾಲನೆ ಮಾಡುವುದು, ಹೆಚ್ಚು ಅಥವಾ ಕಡಿಮೆ ತಿನ್ನುವುದು ಅಥವಾ ಮಲಗುವುದು
ಆಲ್ಕೋಹಾಲ್ ಅಥವ ಮಾದಕ ವಸ್ತುಗಳನ್ನು ಅತಿಯಾಗಿ ಬಳಸುವುದನ್ನು ಮಾಡುತ್ತಾರೆ. ಇಂತಹ ಅಪಾಯಕಾರಿ ಬದಲಾವಣೆಗಳು ಕಂಡು ಬಂದಲ್ಲಿ ನಿರ್ಲಕ್ಷಿಸದೆ ತಕ್ಷಣ ಹತ್ತಿರದ ಮನೋವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಭೇಟಿಯಾಗಿ. ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರೆ ದೊಡ್ಡ ಅಪಾಯದಿಂದ ಪಾರಾಗಬಹುದು.