ನ್ಯೂಸ್ ನಾಟೌಟ್: ಸುಳ್ಯದಲ್ಲಿ ಮಂಗಳವಾರ ಬೆಳಗ್ಗೆ ಸರಿ ಸುಮಾರು 11ಗಂಟೆಯ ವೇಳೆಗೆ ಸೂರ್ಯನ ಸುತ್ತ ಉಂಗುರಾಕೃತಿಯ ಸೌರಪ್ರಭೆ ಗೋಚರಿಸಿದೆ. ತಿಳಿ ಆಗಸದಲ್ಲಿ ಗೋಚರಿಸಿದ ಈ ವಿಸ್ಮಯಕಾರಿ ದೃಶ್ಯವನ್ನು ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕರು ಸೆರೆ ಹಿಡಿದಿದ್ದಾರೆ.
ಇದು ಅನೇಕ ಜನರಿಗೆ ಅತ್ಯಂತ ವಿಶಿಷ್ಟವಾದರೂ, ಈ ವಿದ್ಯಮಾನವು ಅಪರೂಪವಲ್ಲ. ‘ಸನ್ ಹ್ಯಾಲೊ’ ಅಥವಾ ಸೌರಪ್ರಭೆ ಎಂದು ಕರೆಯಲ್ಪಡುವ ಇದು ಮೋಡಗಳೊಳಗೆ ಇರುವ ಮಂಜುಗಡ್ಡೆಯ ಹರಳುಗಳಿಗೆ ಸೂರ್ಯನ ಬೆಳಕು ಪ್ರತಿಫಲಿಸಿದಾಗ ಉಂಟಾಗುವ ವಿದ್ಯಮಾನವಾಗಿದೆ. ಸೂರ್ಯನ ಸುತ್ತಲಿನ ತ್ರಿಜ್ಯದಿಂದಾಗಿ ಇದನ್ನು ’22 ಡಿಗ್ರಿ ಹ್ಯಾಲೊ ಎಂದೂ ಕರೆಯುತ್ತಾರೆ.
22-ಡಿಗ್ರಿ ಸೌರಪ್ರಭೆ ಆಪ್ಟಿಕಲ್ ವಿದ್ಯಮಾನವಾಗಿದ್ದು ಅದು ಮಂಜುಗಡ್ಡೆಯ ಹರಳಿನಲ್ಲಿ ಸೂರ್ಯರಶ್ಮಿಯ ಪ್ರತಿಫಲನವಾಗಿದೆ. ಸೂರ್ಯನ ಪ್ರಭಾವಲಯ ಅಥವಾ ಸಾಂದರ್ಭಿಕವಾಗಿ ಚಂದ್ರನನ್ನು (ಚಂದ್ರನ ಉಂಗುರ ಅಥವಾ ಚಳಿಗಾಲದ ಪ್ರಭಾವಲಯ ಎಂದೂ ಕರೆಯುತ್ತಾರೆ), ಸಿರಸ್ ಮೋಡಗಳಲ್ಲಿ (ಚದುರಿರುವ ಕೂದಲಿನಂತಿರುವ ಚಿಕ್ಕ ಮೋಡಗಳು) ಇರುವ ಷಟ್ಬುಜಾಕೃತಿಯ ಹಿಮದ ಹರಳುಗಳ ಮೂಲಕ ಸೂರ್ಯನ ಅಥವಾ ಚಂದ್ರನ ಕಿರಣಗಳು ಹಾಯ್ದು ವಕ್ರೀಭವನಗೊಂಡಾಗ ಇದು ಸಂಭವಿಸುತ್ತದೆ.
ಈ ಮೋಡಗಳು ಲಕ್ಷಾಂತರ ಸಣ್ಣ ಮಂಜುಗಡ್ಡೆಯ ಹರಳುಗಳನನು ಒಳಗೊಂಡಿರುತ್ತವೆ. ಇಲ್ಲಿ ಬೆಳಕು ಬೆಳಕನ್ನು ವಕ್ರೀಭವನಕ್ಕೊಳಗಾಗಿ ವಿಭಜಿಸಿ ಮತ್ತು ಪ್ರತಿಫಲಿಸುವಾಗ ವೃತ್ತಾಕಾರದ ಮಳೆಬಿಲ್ಲು ರೂಪುಗೊಳ್ಳುತ್ತದೆ.