ನ್ಯೂಸ್ ನಾಟೌಟ್: ಸಮಾಜದಲ್ಲಿ ಗೌರವಯುತವಾಗಿ ಬದುಕುವ ಮಹಿಳೆಯರಿಗೆ ಇತ್ತೀಚೆಗೆ ಕಾಮುಕರ ಕಾಟ ಹೆಚ್ಚಾಗುತ್ತಿದೆ. ಕೆಲವರು ಸಹಿಸಿಕೊಂಡು ಹಿಂಸೆಯನ್ನು ತಮ್ಮೊಳಗೇ ಅನುಭವಿಸಿಕೊಂಡು ಹೋದರೆ ಇನ್ನೂ ಕೆಲವರು ಸಿಡಿದೆದ್ದು ಪ್ರತಿಭಟಿಸುವಂತಹ ಧೈರ್ಯ ತೋರುತ್ತಾರೆ. ಹಾಗೆ ಸಿಡಿದೆದ್ದ ಮಹಿಳೆಯೊಬ್ಬರು ಇದೀಗ ಸುಳ್ಯದ ಪೊಲೀಸ್ ಠಾಣೆ ಮೆಟ್ಟಿಲೇರಿ ಯುವಕನ ಚಳಿ ಬಿಡಿಸಿರುವ ಘಟನೆ ನಡೆದಿದೆ.
ಸುಳ್ಯ ಮೂಲದ ಮಹಿಳೆಯೊಬ್ಬರು ದೂರದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ಅಲ್ಲಿ ನೆಲೆಸಿದ್ದಾರೆ. ಅವರಿಗೆ ಒಂದು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ ತಡರಾತ್ರಿ ಕರೆ ಬರುತ್ತದೆ. ಉದ್ಯೋಗದ ಹಿನ್ನೆಲೆಯಲ್ಲಿ ಬಂದ ಕರೆ ಆಗಿರಬಹುದು ಎಂದು ಸ್ವೀಕರಿಸುತ್ತಾರೆ. ಆದರೆ ಆ ಕರೆಯೇ ಅವರಿಗೆ ದೊಡ್ಡ ತಲೆಬಿಸಿಯನ್ನು ತಂದಿಡುತ್ತದೆ. ‘ನಾನು ಯಾರು ಗೊತ್ತಾ..?’ ಅಂತ ಮಹಿಳೆಯನ್ನು ಮೊದಲಿಗೆ ಮಾತನಾಡಿಸುವ ಪ್ರಯತ್ನವನ್ನು ಅಪರಿಚಿತ ನಡೆಸುತ್ತಾನೆ.
ಇದಕ್ಕೆ ಅವರು ಇಲ್ಲ ಅನ್ನುತ್ತಾರೆ. ‘ಯಾಕೆ ಈ ತಡರಾತ್ರಿ ಕಾಲ್ ಮಾಡಿದ್ದೀರಿ..? ನಿಮ್ಮ ಮನೆಯಲ್ಲಿ ಯಾರು ಹೆಣ್ಣು ಮಕ್ಕಳು ಇಲ್ವಾ..?’ ಅಂತ ಮಹಿಳೆ ಗರಂ ಆಗಿ ಪ್ರಶ್ನಿಸಿದ್ದಾರೆ. ಕರೆಯನ್ನು ಕಟ್ ಮಾಡಿದ್ದಾರೆ. ಇವರು ಫೋನ್ ಕಟ್ ಮಾಡಿದ್ದರೂ ಆತನಿಂದ ನಿರಂತರ ಕರೆಗಳು ತಡರಾತ್ರಿ ಪೂರ್ತಿ ಬರುತ್ತಿತ್ತು. ನಂಬರ್ ಬ್ಲಾಕ್ ಮಾಡಿದರೆ ಮತ್ತೊಂದು ಅಪರಿಚಿತ ನಂಬರ್ ನಿಂದಲೂ ಕರೆ ಬರುತ್ತಿತ್ತು.
ಈ ಕಿರಿಕಿರಿ ತಡೆಯಲಾರದೆ ಅವರು ತಮ್ಮ ಸಹೋದರ, ಪತಿ ಹಾಗೂ ಪರಿಚಯದ ಪೊಲೀಸ್ ಇನ್ಸ್ ಪೆಕ್ಟರ್ ವೊಬ್ಬರಿಗೆ ತಿಳಿಸುತ್ತಾರೆ. ಈತ ಯಾರು ಅನ್ನುವುದನ್ನು ಟ್ರ್ಯಾಕ್ ಮಾಡುತ್ತಾರೆ. ಆತ ಕೂಡ ಸುಳ್ಯದವನೇ ಎನ್ನುವುದು ಗೊತ್ತಾಗುತ್ತದೆ. ರಾಜೇಶ್ ಎನ್ ಅಂತ ಫೇಸ್ ಬುಕ್ ನಲ್ಲಿ ಆತನ ಡಿಟೇಲ್ಸ್ ಕೂಡ ಸಿಗುತ್ತದೆ. ಮಡಪ್ಪಾಡಿ ಮೂಲದವ ಮಂಗಳೂರಿನಲ್ಲಿ ಫೈನಾನ್ಸ್ ಕಂಪನಿಯಲ್ಲಿ ಕೆಲಸದಲ್ಲಿದ್ದು ಒಂದು ವರ್ಷದ ಹಿಂದೆ ಮರ್ಕಂಜದಿಂದ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮತ್ತೊಂದು ಕಡೆಯಿಂದ ಮಹಿಳೆಯ ಸಹೋದರ ಕೂಡ ಕರೆ ಮಾಡಿದಾಗ ಸಂತ್ರಸ್ತ ಮಹಿಳೆ ಮತ್ತು ಅವರ ತಾಯಿ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾನೆ.
ಈ ಹಂತದಲ್ಲಿ ಪೊಲೀಸರು ಆತನಿಗೆ ಕರೆ ಮಾಡಿ.. ‘ಏನಯ್ಯ ಹೆಣ್ಮಕ್ಕಳಿಗೆ ಹೀಗೆಲ್ಲ ಮಾಡ್ತಿಯಂತೆ..?’ ಎಂದು ಕೇಳಿದ್ದಾರೆ. ಪೊಲೀಸ್ ಅನ್ನುವುದನ್ನು ಕೂಡ ನೋಡದೆ ಅವರಿಗೂ ಆತ ಕೆಟ್ಟ ಪದಗಳಿಂದ ಬೈದಿದ್ದಾನೆ. ಇಷ್ಟೆಲ್ಲ ಮಾಡಿದವನನ್ನು ಪೊಲೀಸ್ ಠಾಣೆಗೆ ಎಳೆಯಲೇ ಬೇಕು ಎಂದು ಮಹಿಳೆ ದೃಢವಾದ ನಿರ್ಧಾರಕ್ಕೆ ಬರುತ್ತಾರೆ.
ನನಗಾದ ಇಂತಹ ಘಟನೆ ಮುಂದೆ ಯಾವ ಹೆಣ್ಣು ಮಕ್ಕಳಿಗೂ ಆಗಬಾರದು, ಸಮಾಜದಲ್ಲಿ ಮಹಿಳೆಯರು ಹೆದರಿ ಕೂತರೆ ಇಂಥಹವರ ಸಂಖ್ಯೆ ಹೆಚ್ಚುತ್ತದೆ. ಹಾಗಾಗಿ ಕ್ರಿಮಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಮಹಿಳೆ ದಿಟ್ಟ ಹೆಜ್ಜೆ ಇಡುತ್ತಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆತನನ್ನು ಅಲ್ಲಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗುತ್ತದೆ.
ಈ ವೇಳೆ ಇನ್ನೋರ್ವ ವ್ಯಕ್ತಿ ಮಹಿಳೆಯ ನಂಬರ್ ಕೊಟ್ಟಿದ್ದಾರೆ ಅನ್ನುವುದು ತಿಳಿದು ಬಂದಿದೆ. ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈತ ವಿವಾಹಿತನಾಗಿದ್ದ, ಈತನ ಪತ್ನಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ ಸಂತ್ರಸ್ತ ಮಹಿಳೆ ವಿಚಾರವನ್ನು ತಿಳಿಸಿದ್ದಾರೆ. ಆಕೆಗೆ ತಿಳಿಸಿದರೂ ಏನೂ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.
ಈ ಬಗ್ಗೆ ‘ನ್ಯೂಸ್ ನಾಟೌಟ್’ ಜೊತೆಗೆ ಮಾತನಾಡಿದ ಸಂತ್ರಸ್ತ ಮಹಿಳೆ, ‘ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಕೆಲವರು ಫೋನ್ ಮೂಲಕ ಕಿರಿಕಿರಿ ಮಾಡುತ್ತಾರೆ. ಅಂಥವರಿಗೆ ತಕ್ಕ ಪಾಠವನ್ನು ಕಲಿಸಲು ಮಹಿಳೆಯರು ಧೈರ್ಯ ತೋರಬೇಕು. ಗಿಡವಾಗಿದ್ದಾಗಲೇ ಇಂಥಹದ್ದನ್ನು ಬುಡಸಮೇತ ಕಿತ್ತು ಹಾಕಿದರೆ ಮುಂದೆ ಯಾವ ಮಹಿಳೆ ಜೊತೆ ಹೀಗೆ ನಡೆದುಕೊಳ್ಳಲು ಯಾರೂ ಧೈರ್ಯ ಮಾಡುವುದಿಲ್ಲ. ನನ್ನ ಹಾಗೆ ಯಾರಾದರೂ ಮಹಿಳೆಯರು ಇಂತಹ ಸಮಸ್ಯೆಗಳಿಗೆ ಸಿಲುಕಿದ್ದರೆ ದಯವಿಟ್ಟು ಪೊಲೀಸರಿಗೆ ದೂರು ನೀಡಿ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದು ಕಿವಿಮಾತು ಹೇಳಿದ್ದಾರೆ.