ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಸೆರೆಬ್ರಲ್ ಪಾಲ್ಸಿ ದಿನವನ್ನು ಶಿಶುವೈದ್ಯಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ಆಚರಿಸಲಾಯಿತು. ಪ್ರತಿವರ್ಷ ಅಕ್ಟೋಬರ್ 6ರಂದು ವಿಶ್ವ ಸೆರೆಬ್ರಲ್ ಪಾಲ್ಸಿ ದಿನವನ್ನು ಆಚರಿಸಲಾಗುತ್ತದೆ.
ಪ್ರಪಂಚದಾದ್ಯಂತ 18 ಮಿಲಿಯನ್ಗೂ ಅಧಿಕ ಮಂದಿ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸೆರೆಬ್ರಲ್ ಪಾಲ್ಸಿ ಎನ್ನುವುದು ಚಲನೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವವರಿಗೆ ನಡೆದಾಡಲು ಕಷ್ಟವಾಗಬಹುದು, ಅಲ್ಲದೆ ಇದು ಹುಟ್ಟಿನಿಂದಲೇ ಇರುವ ಸಮಸ್ಯೆಯಾಗಿದೆ. ನರಮಂಡಲದಲ್ಲಿ ತೊಂದರೆಗಳಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದೊಂದು ಜೀವನ ಪರ್ಯಂತ ಕಾಡುವ ಹಾಗೂ ಗುಣಪಡಿಸಲು ಸಾಧ್ಯವಾಗದಂತಹ ಸಮಸ್ಯೆಯಾಗಿದೆ. ಇತರರಿಗೆ ಹೋಲಿಸಿದರೆ ಈ ಸಮಸ್ಯೆ ಇರುವವರರಿಗೆ ಜೀವಿತಾವಧಿಯೂ ಕಡಿಮೆ. ಈ ತೊಂದರೆ ಇರುವವರಿಗೆ ಸರಿಯಾಗಿ ನಡೆಯಲು ಆಗುವುದಿಲ್ಲ, ಮಾತನಾಡಲು ಸಾಧ್ಯವಾಗುವುದಿಲ್ಲ, ಅವರು ತಮ್ಮ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಕೆಲವೊಮ್ಮೆ ಅಪಸ್ಮಾರ ಮತ್ತು ಬೌದ್ಧಿಕ ಅಸಾಮರ್ಥ್ಯವನ್ನು ಹೊಂದಿರುತ್ತಾರೆ.
ಕಾರ್ಯಕ್ರಮದಲ್ಲಿ ಶಿಶುವೈದ್ಯಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಶ್ಯಾಂ ಸುಂದರ್ ಎಸ್, ಪ್ರಾಧ್ಯಾಪಕರಾದ ಡಾ| ಪ್ರಸಾದ್ ನಾಯಕ್, ಸಹಾಯಕ ಪ್ರಾಧ್ಯಾಪಕರಾದ ಡಾ| ಸುನೀತಾ ಹಾಗೂ ಮತ್ತಿತರರು ಉಪಸ್ಥಿತರಿದ್ದು ಉಪಯುಕ್ತ ಮಾಹಿತಿ ನೀಡಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕೈ ನಟರಾಜನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.