ನ್ಯೂಸ್ ನಾಟೌಟ್: ಕಳೆದ ಕೆಲವು ವರ್ಷಗಳಿಂದ ಸುಳ್ಯದಲ್ಲಿ ಸೈಕಲ್ ಏರಿ ಐಸ್ ಕ್ಯಾಂಡಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಯುವಕನೊಬ್ಬ ಅನಾರೋಗ್ಯದ ಕಾರಣದಿಂದ ಹಠಾತ್ ಇಹಲೋಕ ತ್ಯಜಿಸಿದ್ದಾನೆ. ಆತನ ಹೆಸರು ದಳ ಸಿಂಗ್. ಈತ ಉತ್ತರ ಪ್ರದೇಶದ ಪಹಾಡ್ ಪುರ ಮೂಲದವನು. ದೂರದ ಊರಿನಿಂದ ಬಂದು ಸುಳ್ಯದಲ್ಲಿ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದ. ಆತನಿಗೆ 35 ವರ್ಷವಾಗಿತ್ತು.
ಮೂರು ವರ್ಷದ ಹಿಂದೆ ಈತನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ಆತ ಪತ್ನಿಯ ತಂಗಿಯನ್ನು ವರಿಸಿದ್ದ ಆದರೆ ಆಕೆಯೂ ಸಾವಿಗೀಡಾದ ಬಳಿಕ ಇದೀಗ ಈತನೂ ಕೂಡ ಸಾವಿಗೀಡಾಗಿರುವುದು ವಿಪರ್ಯಾಸ. ಈತ ಇಬ್ಬರು ಮಕ್ಕಳನ್ನು ಬಂಧುಗಳನ್ನು, ಸ್ನೇಹಿತರನ್ನು ಅಗಲಿದ್ದಾನೆ. ಮೃತರ ಅಂತ್ಯಕ್ರಿಯೆಯನ್ನು ಕೊಡಿಯಾಲ ಬೈಲ್ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಯಿತು. ಕಂಠಿ ಶರೀಫ್, ನಗರ ಪಂಚಾಯತ್ ಸದಸ್ಯ ಉಮ್ಮರ್, ಕರಾವಳಿ ರಝಾಕ್ ನೊಂದ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.