ನ್ಯೂಸ್ ನಾಟೌಟ್: ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪೊಲೀಸರನ್ನು ದೂಡಿ ಹಾಕಿ ಕೈದಿಯೊಬ್ಬ ಹಾರಿ ಬಿದ್ದು ಎಸ್ಕೇಪ್ ಆಗಿರುವ ಘಟನೆ ಅ.5 ರಂದು ಸುಳ್ಯದಲ್ಲಿ ನಡೆಯಿತು. ಇದೊಂದು ರೀತಿಯ ಸಿನಿಮೀಯ ಘಟನೆ ಅಂದರೆ ಅತಿಶಯೋಕ್ತಿಯಾಗಲಾರದು.
ಪೊಲೀಸರು ಕಳ್ಳನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಕಳ್ಳ ಪೊಲೀಸರನ್ನೇ ವಂಚಿಸಿ ಓಡುವುದನ್ನು ಸಿನಿಮಾಗಳಲ್ಲಿ ನೋಡಿದ್ದೆವು. ಇಂದು ಸುಳ್ಯ ಆಸ್ಪತ್ರೆಯ ಒಂದಷ್ಟು ಮಂದಿ ರಿಯಲ್ ಆಗಿಯೇ ಇಂತಹುದೇ ಸನ್ನಿವೇಶವನ್ನು ನೋಡಿಬಿಟ್ಟರು. ಅಂತಹ ಒಂದು ಘಟನೆಗೆ ಸುಳ್ಯ ಸಾಕ್ಷಿಯಾದದ್ದು ವಿಶೇಷವಾಗಿತ್ತು.
ಇನ್ನೇನು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು, ಓರ್ವ ಪೊಲೀಸ್ ಚೀಟಿ ಮಾಡಲು ನಿಂತಿದ್ದರು, ಈ ವೇಳೆ ಕೈದಿ ತನ್ನ ಹತ್ತಿರ ಇದ್ದ ಮತ್ತೋರ್ವ ಪೊಲೀಸರನ್ನ ದೂಡಿ ಹಾಕಿ ಓಡಿದ್ದಾನೆ.
ಹಾಗೆ ಓಡಿದ ಕಳ್ಳ ಇದುವರೆಗೆ ಪತ್ತೆಯಾಗಿಲ್ಲ, ಈತ ಯಾವ ಕೇಸಿನಲ್ಲಿ ಸಿಕ್ಕಿದವನು ಅನ್ನುವುದು ಪೊಲೀಸರನ್ನು ಬಿಟ್ಟು ಯಾರಿಗೂ ಗೊತ್ತಿರಲಿಲ್ಲ. ಆ ಬಳಿಕ ಗೊತ್ತಾಯಿತು ಈತ ಮಹಾನ್ ಕಳ್ಳ ಅಂತ.
ಎರಡು ವರ್ಷದ ಹಿಂದೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ನಡುಗಿಸಿದ್ದ ಸಂಪಾಜೆಯಲ್ಲಿ ನಡೆದ ದರೋಡೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ, ಚಟ್ಟೆಕಲ್ಲಿನ ಅಂಬರೀಶ್ ಭಟ್ಟರ ಮನೆ ಮಂದಿಗೆ ಮಚ್ಚು ತೋರಿಸಿ ಹಣ, ಒಡವೆಯನ್ನು ಕಳ್ಳರ ತಂಡ ದರೋಡೆ ಮಾಡಿತ್ತು. ಈ ಪ್ರಕರಣದಲ್ಲಿ ಈತನನ್ನು ತಮಿಳುನಾಡಿನಿಂದ ಬಂಧಿಸಲಾಗಿತ್ತು. ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಳ್ಳುತ್ತಿದ್ದ. ಈತನ ಹೆಸರು ಕಿರಣ ಎಂದು ತಿಳಿದುಬಂದಿದೆ. ಈತ ಸಿಕ್ಕಿದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.