- +91 73497 60202
- [email protected]
- November 24, 2024 4:40 AM
ರಸ್ತೆ ಬದಿಯ ‘ಮೊಮೋಸ್’ ತಿಂದು ಮಹಿಳೆ ಸಾವು..! 22 ಮಂದಿ ಆಸ್ಪತ್ರೆಗೆ ದಾಖಲು..!
ನ್ಯೂಸ್ ನಾಟೌಟ್ : ರಸ್ತೆ ಬದಿ ಮಳಿಗೆಯಲ್ಲಿ ಮೊಮೋಸ್ ಸೇವಿಸಿದ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಇಬ್ಬರು ಪುತ್ರಿಯರು ಹಾಗೂ ಇತರ 20 ಮಂದಿ ಅಸ್ವಸ್ಥಗೊಂಡಿರುವ ಘಟನೆ ಹೈದರಾಬಾದ್ ನಗರದ ಬಂಜಾರಾ ಹಿಲ್ ಪ್ರದೇಶದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಮಹಿಳೆ ಸೋಮವಾರ ಮೃತಪಟ್ಟಿದ್ದು, ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇಷ್ಮಾ ಬೇಗಂ (31) ಮತ್ತು 14 ಹಾಗೂ 12 ವರ್ಷ ವಯಸ್ಸಿನ ಆಕೆಯ ಇಬ್ಬರು ಹೆಣ್ಣುಮಕ್ಕಳು ಅ.25ರಂದು ಬೀದಿ ಬದಿಯ ಮೊಮೋಸ್ ಸೇವಿಸಿದ್ದರು. ತಕ್ಷಣವೇ ಮೂವರಿಗು ವಿಷಪ್ರಾಶನದ ಲಕ್ಷಣಗಳು ಕಂಡುಬಂದವು. ವಾಂತಿ ಬೇಧಿ ಮತ್ತು ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಸ್ವಲ್ಪ ವಿಶ್ರಾಂತಿ ಪಡೆದರೆ ಆರೋಗ್ಯ ಸುಧಾರಿಸಬಹುದು ಎಂದು ಆಸ್ಪತ್ರೆಗೆ ತೆರಳದೆ ನಿರ್ಲಕ್ಷ್ಯ ತೋರಿದ್ದಾರೆ. ಹೊಟ್ಟೆನೋವು ಕಡಿಮೆಯಾಗದೆ ಇದ್ದಾಗ ಅ.27 ರಂದು ಆಸ್ಪತ್ರೆಗೆ ದಾಖಲಾದರು. ಕೊನೆಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಕುಟುಂಬ ಸದಸ್ಯರ ದೂರಿನ ಮೇರೆಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ಆಹಾರ ಸಂರಕ್ಷಣಾ ಅಧಿಕಾರಿಗಳು ಬಂಜಾರಾ ಹಿಲ್ಸ್ ಪೊಲೀಸರ ಸಹಕಾರದಿಂದ ಚಿಂತಲ್ ಬಸ್ತಿಯ ಬೀದಿ ಬದಿ ವ್ಯಾಪಾರಿಯನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ, ಈ ವ್ಯವಹಾರ ನಡೆಸುತ್ತಿದ್ದ ಬಿಹಾರ ಮೂಲದ ಇಬ್ಬರನ್ನು ಬಂಧಿಸಲಾಗಿದೆ. ಇದೇ ಮಳಿಗೆಯಲ್ಲಿ ಮೊಮೋಸ್ ಸೇವಿಸಿದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದರ ವಿಶ್ಲೇಷಣೆಗಾಗಿ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ