ನ್ಯೂಸ್ ನಾಟೌಟ್: ಮುಂಬೈಯ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 9 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು(ಅ.27) ನಡೆದಿದೆ.
ಉತ್ತರ ಪ್ರದೇಶದ ಗೋರಖ್ ಪುರಕ್ಕೆ ತೆರಳುತ್ತಿದ್ದ ರೈಲನ್ನು ಹತ್ತಲು ಮುಂದಾದಾಗ ಪ್ರಯಾಣಿಕರ ನಡುವೆ ನೂಕುನುಗ್ಗಲು ಸೃಷ್ಟಿಯಾಗಿದೆ. ಗಾಯಗೊಂಡವರ ಪೈಕಿ 7 ಮಂದಿಯ ಆರೋಗ್ಯ ಸ್ಥಿರವಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ದೀಪಾವಳಿ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಲು ರೈಲನ್ನು ಹತ್ತುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ.
ಬಾಂದ್ರಾದಿಂದ ಗೋರಖ್ ಪುರಕ್ಕೆ ಹೋಗುವ ರೈಲು ಸಂಖ್ಯೆ 22921 ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 1 ಕ್ಕೆ ಬಂದು ನಿಂತಿತ್ತು. ಗೋರಖ್ ಪುರದ ಸಾಪ್ತಾಹಿಕ ರೈಲು ಭಾನುವಾರ ಬೆಳಿಗ್ಗೆ 5:10ಕ್ಕೆ ಹೊರಡಬೇಕಿತ್ತು. ಆದರೆ ರೈಲು ತಡವಾಗಿ 5:56ಕ್ಕೆ ನಿಲ್ದಾಣಕ್ಕೆ ಬಂದಿದೆ. ಮೊದಲೇ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ ಎನ್ನಲಾಗಿದೆ.
ಗಾಯಗೊಂಡವರನ್ನು ರೈಲ್ವೇ ಪೊಲೀಸ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಸ್ಟ್ರೆಚರ್ಗಳಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
Click