ಪುತ್ತೂರು: 302 ವರ್ಷಗಳಷ್ಟು ಹಳೇಯ ಕನ್ನಡ ಶಿಲಾ ಶಾಸನ ಪತ್ತೆ..! 17 ನೇ ಶತಮಾನದ ಕಥೆ ಹೇಳುತ್ತಿವೆ ಅದರಲ್ಲಿ ಬರೆದ ಸಾಲುಗಳು..!

ನ್ಯೂಸ್ ನಾಟೌಟ್: ಸುಮಾರು 302 ವರ್ಷ ಪುರಾತನ, 17 ನೇ ಶತಮಾನದ ಕನ್ನಡ ಶಿಲಾಶಾಸನವೊಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಮುದ್ಯ ಎಂಬಲ್ಲಿ ಪತ್ತೆಯಾಗಿದೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆಸುವಂತಹ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆಯಡಿ ನಡೆದ ಪುರಾತನ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಈ ಪುರಾತನ ಕನ್ನಡ ಶಾಸನ ಲಭ್ಯವಾಗಿದೆ. ಸಂಶೋಧಕರಾದ ಡಾ. ಉಮಾನಾಥ ಶೆಣೈ ಅವರ ನೇತೃತ್ವದಲ್ಲಿ ಯುವ ಅಧ್ಯಯನಕಾರರಾದ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ತುಳುನಾಡ್ ಸಹಕಾರದೊಂದಿಗೆ ಅಧ್ಯಯನ ಮಾಡಲಾಯಿತು ಎಂದು ವರದಿ ತಿಳಿಸಿದೆ. ಪತ್ತೆಯಾದ ಶಿಲಾ ಶಾಸನವು ಸುಮಾರು 37 ಇಂಚು ಎತ್ತರ 21 ಇಂಚು ಅಗಲವಾಗಿದೆ. ಶಾಸನದ ಮುಂಭಾಗದಲ್ಲಿ 18 ಸಾಲುಗಳು ಹಾಗೂ ಹಿಂಭಾಗದಲ್ಲಿ 9 ಸಾಲುಗಳನ್ನು ಒಳಗೊಂಡ ಬರಹವನ್ನು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ. ಶಾಸನದ ಶಿರೋಭಾಗದ ಮಂಟಪದಲ್ಲಿ ಶಿವಲಿಂಗದ ಆಕೃತಿಯನ್ನು ಹಾಗೂ ಬಲ, ಎಡಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ದೀಪಗಳನ್ನು ಕೆತ್ತಲಾಗಿದೆ. ಶಾಸನದ ಹಿಂಭಾಗದಲ್ಲಿ ಬಾಲವನ್ನು ಎತ್ತಿ ಮುಖವನ್ನು ಹಿಂದಕ್ಕೆ ತಿರುಗಿಸಿದ ಭಂಗಿಯಲ್ಲಿರುವ ಶಾರ್ದೂಲ ಹಾಗೂ ಅದರ ಎಡಬಲ ಭಾಗದಲ್ಲಿ ಐದು ಎಸಳಿನ ಹೂವನ್ನು ಕೆತ್ತಲಾಗಿದೆ. ಸ್ವಸ್ತಿ ಶ್ರೀ ಮಹಾಗಣಪತಿಯೇ ನಮಃ ಎಂಬ ಪ್ರಾರ್ಥನಾ ಶ್ಲೋಕದಿಂದ ಪ್ರಾರಂಭವಾಗುವ ಈ ಕನ್ನಡ ಶಾಸನವನ್ನು ಶಕ ವರುಷ 1644 ಅಂದರೆ ಕ್ರಿಸ್ತಶಕ 1722 ವಿಕೃತಿ ನಾಮ ಸಂವತ್ಸರದ ತುಲಾ ಬೃಹಸ್ಪತಿ ಸಿಂಹ ಮಾಸದಲ್ಲಿ ಸ್ಥಾಪಿಸಲಾಗಿದೆ. ಈ ಶಾಸನದ ಪ್ರಕಾರ ವರ್ಷಂಪ್ರತಿ ಮೆದುಗೆ ದೇವಸ್ಥಾನಕ್ಕೆ ಸೋಣ ತಿಂಗಳಲ್ಲಿ ಅಥವಾ ಸಿಂಹ ಮಾಸದಲ್ಲಿ ಮೂವತ್ತು ದಿನಗಳಲ್ಲಿ ದಿನಂಪ್ರತಿ ಬರುವ ಬ್ರಾಹ್ಮಣರಿಗೆ ಅವರು ಬಂದ ಸಮಯಕ್ಕೆ ಬಲ್ಲಾಳರು ಹೊಸತಾಗಿ ಮಾಡಿಸಿದ ನಾಯಿಲದ ಕೆಳ ಭೂಮಿಯ ಫಲದಲ್ಲಿ ಭೋಜನವನ್ನು ನೀಡಬೇಕು. ಈ ಧರ್ಮವನ್ನು ನಾಯಿಲದಲ್ಲಿ ಬಾಳುವವರು ಅಚಂದ್ರಾರ್ಕವಾಗಿ ಪಾಲಿಸಿಕೊಂಡು ಬರತಕ್ಕದ್ದು. ಇದನ್ನು ಈ ತುಳು ರಾಜ್ಯಕ್ಕೆ ಅಧೀಕರಿಸಿದ ಬಲ್ಲಾಳರು ಮಾಡಿಲ್ಲವೆಂದು ಯಾರಾದರೂ ಬೇಧ ಮಾಡಿದರೆ ಅಥವಾ ಕಂದಕವನ್ನು ಏರ್ಪಡಿಸಿದರೆ ಅವರಿಗೆ ಸಾವಿರ ಕಪಿಲೆಯನ್ನು, ಬ್ರಾಹ್ಮಣರನ್ನು, ಮಗು, ತಾಯಿ, ತಂದೆಯರನ್ನು ವಾರಣಾಸಿಯಲ್ಲಿ ವಧಿಸಿದ ಪಾಪ ತಗಲುವುದು ಎಂಬ ಬರಹವಿದೆ. ಪೀಠದಲ್ಲಿ ಶಿವಕಳೆಯಿರುವ, ಎತ್ತುಗಳ ಪಾದೆಯ ಈ ಧರ್ಮಶಾಸನವನ್ನು ನಾರಣ ಶೆಟ್ಟಿ ಎಂಬುವವರು ಹೇಳಿ, ಕೇಶವನಾಥ ಎಂಬವರಲ್ಲಿ ಬರೆಸಿ ಸಮರ್ಪಿಸಿದರು ಎಂಬುದಾಗಿದೆ. ಶಾಸನ ತಜ್ಞ ಹಾಗೂ ವಿಗ್ರಹ ತಜ್ಞರಾದ ಡಾ. ವೈ. ಉಮಾನಾಥ ಶೆಣೈ ಅವರ ಪ್ರಕಾರ ಇದು ಸುಮಾರು ಹದಿನಾರನೆಯ ಶತಮಾನಕ್ಕೆ ಸಂಬಂಧಿಸಿದಾಗಿದ್ದು, ಜೈನ ಸಂಪ್ರದಾಯದ ಬ್ರಹ್ಮದೇವರ ಮೂರ್ತಿ. ಇದು ಸ್ಥಳೀಯ ಜೈನ ಬಲ್ಲಾಳ ಅರಸರು ಈ ದೇವಾಲಯಕ್ಕೆ ಕೊಟ್ಟದ್ದಿರಬೇಕು. ಇದು ಪಂಚಲಿಂಗೇಶ್ವರನ ದೇವಾಲಯವಾಗಿರುವುದರಿಂದ ಶಕ್ತಿ ಪರಾಕ್ರಮಗಳ ಜೈನ ಬ್ರಹ್ಮ ದೇವರ ಮೂರ್ತಿಯನ್ನು ಇಲ್ಲಿಗೆ ಕೊಟ್ಟಿರುವುದು ತೀರ ಸಹಜವೇ ಆಗಿದೆ ಎನ್ನಲಾಗಿದೆ. Click