ನ್ಯೂಸ್ ನಾಟೌಟ್: 2016ರಲ್ಲಿ 23 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಮಂಗಳೂರಿನ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಶನಿವಾರ(ಅ.27) ವಿಧಿಸಿದೆ.
ಆರೋಪಿಯನ್ನು ಪುತ್ತೂರು ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಜಗನ್ನಾಥ ಕೆ ಮೊಗೇರ (38) ಎಂದು ಗುರುತಿಸಲಾಗಿದೆ. ಈತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಬಗ್ಗೆ 2016ರ ಫೆ.25ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆಯಲ್ಲಿ ಒಬ್ಬಳೇ ಇದ್ದುದನ್ನು ತಿಳಿದ ಆರೋಪಿ ನೀರು ಕೇಳುವ ನೆಪದಲ್ಲಿ ಯುವತಿಯ ಮನೆಗೆ ತೆರಳಿ ಅತ್ಯಾಚಾರವೆಸಗಿದ್ದ ಮತ್ತು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದ. ಆ ನಂತರವೂ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರವೆಸಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಸಂತ್ರಸ್ತೆ ಗರ್ಭಿಣಿಯಾದ ವಿಷಯ ತಿಳಿದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಯುವತಿ ಬೆದರಿಕೆ ಮತ್ತು ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದಳು. ಅದರಂತೆ ಪ್ರಕರಣ ದಾಖಲಿಸಿದ್ದ ಅಂದಿನ ಇನ್ಸ್ ಪೆಕ್ಟರ್ ಅನಿಲ್ ಎಸ್ ಕುಲಕರ್ಣಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆಯ ಬಳಿಕ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿದ ನ್ಯಾಯಾಧೀಶರು ಅತ್ಯಾಚಾರದ ಆರೋಪದಡಿಯಲ್ಲಿ 5,000 ರೂ.ಗಳ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಹೆಚ್ಚುವರಿ 5,000 ರೂ.ಗಳ ದಂಡವನ್ನು ವಿಧಿಸಿದ್ದಾರೆ.
ದಂಡವನ್ನು ಪಾವತಿಸದಿದ್ದಲ್ಲಿ ಹೆಚ್ಚುವರಿ ಎರಡು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎನ್ನಲಾಗಿದೆ.
Click