ನ್ಯೂಸ್ ನಾಟೌಟ್ : ಇಸ್ರೇಲ್ ದೇಶದ ತಜ್ಞರು ಟೈಂ ಮೆಷಿನ್ ಕಂಡು ಹಿಡಿದಿದ್ದಾರೆ. ಇದು ನಿಮ್ಮ ಯೌವ್ವನವನ್ನು ಮರಳಿ ತರುತ್ತದೆ ಎಂದು ನಂಬಿಸಿದ್ದ ಉತ್ತರ ಪ್ರದೇಶದ ದಂಪತಿ, ಹಲವು ವೃದ್ಧರಿಂದ 35 ಕೋಟಿ ರೂ. ಗೂ ಹೆಚ್ಚು ಹಣವನ್ನು ಪಡೆದಿದ್ದರು ಎಂಬ ವಿಚಾರ ಬಯಲಾಗಿದೆ.
ರಾಜೀವ್ ಕುಮಾರ್ ದುಬೆ ಹಾಗೂ ಆತನ ಪತ್ನಿ ರಶ್ಮಿ ದುಬೆ ಉತ್ತರ ಪ್ರದೇಶ ಕಾನ್ಪುರದ ಕಿದ್ವಾಯಿ ನಗರ ಎಂಬಲ್ಲಿ ರಿವೈವಲ್ ವರ್ಲ್ಡ್ ಎಂಬ ಥೆರಪಿ ಕೇಂದ್ರವನ್ನು ಆರಂಭಿಸಿದ್ದರು. ಈ ಕೇಂದ್ರದಲ್ಲಿ ತಾವು ಇಸ್ರೇಲ್ ನಿಂದ ತರಿಸಿದ ಟೈಮ್ ಮೆಷಿನ್ ಇಟ್ಟಿರೋದಾಗಿ ಹೇಳಿದ್ದರು. ಈ ಯಂತ್ರದಲ್ಲಿ ಚಿಕಿತ್ಸೆ ಪಡೆದರೆ 60 ವರ್ಷದ ವೃದ್ಧರು 25 ವರ್ಷದ ಯುವಕರಾಗಬಹುದು ಎಂದು ನಂಬಿಸಿದ್ದರು ಎನ್ನಲಾಗಿದೆ.
ತಾವು ಆಕ್ಸಿಜನ್ ಥೆರಪಿ ಮಾಡುವ ಮೂಲಕ ವಯೋವೃದ್ಧರಿಗೆ ಯೌವ್ವನ ಮರಳಿಸೋದಾಗಿ ಈ ವಂಚಕರು ತಮ್ಮ ಗ್ರಾಹಕರನ್ನು ನಂಬಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂದಿನ ದಿನಗಳಲ್ಲಿ ವಾಯು ಮಾಲಿನ್ಯ ವಿಪರೀತವಾಗಿದೆ. ಹೀಗಾಗಿ, ಜನರು ಅತಿ ವೇಗವಾಗಿ ವಯೋವೃದ್ಧರಾಗುತ್ತಿದ್ದಾರೆ. ನಾವು ನೀಡುವ ಆಮ್ಲಜನಕ ಥೆರಪಿಯಿಂದ ನೀವು ಕಳೆದುಕೊಂಡ ಯೌವ್ವನವನ್ನು ಮರಳಿ ಪಡೆಯಬಹುದು ಎಂದು ಈ ವಂಚಕರು ದಂಪತಿ ವೃದ್ಧರನ್ನು ನಂಬಿಸಿದ್ದರು.
ವೃದ್ಧರಿಗಾಗಿಯೇ ವಿಶೇಷ ಪ್ಯಾಕೇಜ್ ರೂಪಿಸಿದ್ದ ಈ ವಂಚಕರು, 10 ಸೆಷನ್ಗಳಿಗೆ 6 ಸಾವಿರ ರೂ. ನಿಗದಿ ಮಾಡಿತ್ತು. ಜೊತೆಯಲ್ಲೇ ಮೂರು ವರ್ಷಗಳ ಒಟ್ಟಾರೆ ಥೆರಪಿಗೆ 90 ಸಾವಿರ ರೂ. ನಿಗದಿ ಮಾಡಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ರೀತಿಯ ಥೆರಪಿ ಪಡೆದ ಹಲವು ಮಂದಿ ವರ್ಷ ಕಳೆದರೂ ತಾವು ಮೊದಲು ಹೇಗಿದ್ದರೋ, ಈಗಲೂ ಹಾಗೇ ಇದ್ದರು. ಅವರ ದೇಹದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಈ ಬಗ್ಗೆ ವೃದ್ಧರು ವಂಚಿಸಿದ್ದ ದಂಪತಿ ಬಳಿ ಹೇಳಿಕೊಂಡೂ ಅವರು ನಾನಾ ಕಾರಣ ಹೇಳಿತ್ತಿದ್ದರು ಎನ್ನಲಾಗಿದೆ. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಹಲವರಿಗೆ ಹೀಗೆಯೇ ಸುಮಾರು 35ಕೋಟಿ ರೂಪಾಯಿ ವಂಚಿಸಿದ್ದ ಬಗ್ಗೆ ತನಿಖೆಯಲ್ಲಿ ಬಯಲಾಗಿದೆ.
Click