ನ್ಯೂಸ್ ನಾಟೌಟ್: ಮುಂದಿನ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಗ್ರೇಸ್ ಮಾರ್ಕ್ಸ್ ಕೊಡಬೇಡಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೀಗಾಗಿ ಮುಂದಿನ ವರ್ಷದಿಂದ 10ನೇ ತರಗತಿ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ನೀಡುವುದಿಲ್ಲ ಎಂದರು.
ಈ ವರ್ಷ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ರಾಜ್ಯದ ಒಟ್ಟಾರೆ ಫಲಿತಾಂಶ ಶೇ73.40 ಆಗಿದೆ. ಕಳೆದ ವರ್ಷ ಶೇ83 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 2288 ಶಾಲೆಗಳು ಶೇ100 ರಷ್ಟು ಫಲಿತಾಂಶ ಪಡೆದಿವೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಹಾಗೂ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ಕಾರಣವಾಗುವ ಕೃಪಾಂಕ ವ್ಯವಸ್ಥೆಯನ್ನು ಮುಂದುವರಿಸದಂತೆ ಸಿಎಂ ಸ್ಪಷ್ಟ ನಿರ್ದೇಶನ ನೀಡಿದ್ದರು.
ಶಾಲಾ ಶಿಕ್ಷಣ ಇಲಾಖೆ ಈ ವರ್ಷ 1.70 ಲಕ್ಷ 10ನೇ ತರಗತಿ ಮಕ್ಕಳಿಗೆ ಶೇ20 ರಷ್ಟು ಕೃಪಾಂಕ ನೀಡಿತ್ತು. ಆದರೂ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಶೇ10 ರಷ್ಟು ಕುಸಿತವಾಗಿದೆ. ಈ ಕೃಪಾಂಕ ನೀಡಿದ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಹಾಗಾಗಿ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ ಯಾವುದೇ ಕಾರಣಕ್ಕೂ ನೀಡಲಾಗುವುದಿಲ್ಲ ಎಂದಿದ್ದಾರೆ.
Click