ನ್ಯೂಸ್ ನಾಟೌಟ್: ಲಾಯರ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ. ಆದರೆ, ಶಾಸಕನಾದ ನಂತರ ಧೂಮಪಾನವನ್ನು ಬಿಟ್ಟೆ. ಹಾಗಾಗಿ ನೀವೂ ಕೆಟ್ಟ ಚಟಗಳಿಗೆ ವ್ಯಸನಿಗಳಾಗಿದ್ದರೆ, ತಕ್ಷಣವೇ ಅವುಗಳನ್ನು ಬಿಟ್ಟುಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಕೋಶ, ಆರೋಗ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ತಂಬಾಕು ಮುಕ್ತ ಯುವ ಅಭಿಯಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು.
ನೀವು ಡ್ರಗ್ಸ್ ಮತ್ತು ಆಲ್ಕೋಹಾಲ್ ವ್ಯಸನಿಗಳಾಗಿದ್ದರೆ, ತಕ್ಷಣ ಅವುಗಳನ್ನು ತ್ಯಜಿಸಿ. ಇದು ಕರ್ನಾಟಕದ ಯುವಕರಲ್ಲಿ ನನ್ನ ವಿನಂತಿ. ತಂಬಾಕು, ಡ್ರಗ್ಸ್ ಮತ್ತು ಮದ್ಯದ ದುಷ್ಪರಿಣಾಮಗಳ ಬಗ್ಗೆ ಎಚ್ಚರದಿಂದಿರಬೇಕು. ಮಾದಕ ದ್ರವ್ಯ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾನೂನು ತಿದ್ದುಪಡಿ ಮಾಡುವ ಮಾರ್ಗಗಳನ್ನು ರಾಜ್ಯ ಸರ್ಕಾರ ಅನ್ವೇಷಿಸುತ್ತಿದೆ. ಆ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲು ಪ್ರಯತ್ನಿಸಲಾಗುವುದು ಯುವಜನತೆ ಈ ದುಶ್ಚಟಕ್ಕೆ ಬಲಿಯಾಗದಂತೆ, ಮಾದಕ ವಸ್ತುಗಳ ದಂಧೆಯನ್ನು ನಿಗ್ರಹಿಸುವುದೇ ಸರ್ಕಾರದ ಗುರಿ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ತಂಬಾಕು ಸೇವನೆಯಿಂದ 13.5 ಲಕ್ಷ ಜನರು ಸಾವನ್ನಪ್ಪಿದ್ದಾರೆ. ತಂಬಾಕು ಸೇವನೆ ಮಾಡುವವರಲ್ಲಿ ಶೇ.50 ರಷ್ಟು ಮಂದಿಗೆ ಕ್ಯಾನ್ಸರ್ ಬರುತ್ತದೆ. ಯುವಜನತೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಬದಲು ಈ ದುಶ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ಈ ಪ್ರಮಾಣದ ಸಾವು ಸಂಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿದ್ದು, ಇದನ್ನು ನಿಗ್ರಹಿಸಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ ಯುವಕ ಯುವತಿಯರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಲ್ಲಿ, ಕೂಡಲೇ ದುಶ್ಚಟಗಳನ್ನು ನಿಲ್ಲಿಸಬೇಕೆಂದು ಕರೆ ನೀಡಿದರು.
ನಾನೂ ಒಂದು ಅವಧಿಯಲ್ಲಿ ತುಂಬಾ ಸಿಗರೇಟ್ ಸೇದುತ್ತಿದ್ದೆ. ನಾನು ಲಾಯರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬರೋಬ್ಬರಿ ದಿನಕ್ಕೆ 4 ಪ್ಯಾಕೆಟ್ ವ್ಹೀಲ್ಸ್ ಸಿಗರೇಟ್ ಸೇದುತ್ತಿದ್ದೆ. ಅಂದರೆ, ಒಂದು ಪ್ಯಾಕೆಟ್ನಲ್ಲಿ 10 ಎಂದುಕೊಂಡರೂ ಒಟ್ಟು 40 ಸಿಗರೇಟ್ ಸೇದುತ್ತಿದ್ದೆ. ನಾನು ಯಾವಾಗ ಶಾಸಕನಾದೆನೋ ಆಗ ಒಮ್ಮೆಲೇ ಜ್ಞಾನೋದಯವಾಗಿ ಸಿಗರೇಟ್ ಸೇದುವುದನ್ನೇ ಬಿಟ್ಟುಬಿಟ್ಟೆ ಎಂದು ಇದೇ ವೇಳೆ ಹೇಳಿದ್ದಾರೆ.
Click