ನ್ಯೂಸ್ ನಾಟೌಟ್ : ಕಣ್ಣು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಒಂದು ಸಲ ನೀವು ಕಣ್ಣು ಮುಚ್ಚಿ ಯೋಚನೆ ಮಾಡಿದಾಗ ಇಡೀ ಜಗತ್ತು ನಮಗೆ ಕತ್ತಲಾಗಿ ಕಾಣುತ್ತದೆ. ಕಣ್ಣಿಲ್ಲದಿದ್ದರೆ ಜೀವನ ಏನು ಅನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅಂತಹ ಕಣ್ಣನ್ನು ರಕ್ಷಿಸಿಕೊಳ್ಳಬೇಕು. ವೈದ್ಯರಿಂದ ಕಾಲ ಕಾಲಕ್ಕೆ ಸೂಕ್ತ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಶಾಲಾಕ್ಯ ತಂತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅಂಕಣ ಬರೆದು ಓದುಗರಿಗೆ ಒಂದಷ್ಟು ಮಾಹಿತಿಗಳನ್ನು ನೀಡುವಂತಹ ಪ್ರಯತ್ನ ಮಾಡಿದ್ದಾರೆ. ಈ ಬಗೆಗಿನ ಕಂಪ್ಲೀಟ್ ಸಾರಂಶ ಇಲ್ಲಿದೆ ಓದಿ.
1. ಕಣ್ಣುಮುಚ್ಚಿ ಬೆಳಿಗ್ಗೆ ಅಥವಾ ಸಂಜೆಯ ಎಳೆಬಿಸಿಲಿನಲ್ಲಿ ಕೂರುವುದು ಕಣ್ಣಿಗೆ ಹಿತಕರ. ತ್ರಿಫಲಾ ಕಷಾಯದ 2 ಬಿಂದುಗಳನ್ನು ಅಥವಾ ಜೇನಿನ ಹನಿಗಳನ್ನು ಕಣ್ಣುಗಳಿಗೆ ಹಾಕಿ, ನಂತರ ಈ ರೀತಿ ಮಾಡಬಹುದು.
2. ಅತೀ ಪ್ರಕಾಶಮಾನವಾದ ಬೆಳಕನ್ನು ನೋಡುವುದು, ಕಣ್ಣುಗಳು ಸದಾ ಬಿಸಿಲಿಗೆ ಹಾಗೂ ಧೂಳು-ಹೊಗೆಗಳಿಗೆ ತೆರೆದುಕೊಳ್ಳುವುದು, ಒಳ್ಳೆಯದಲ್ಲ.
3. ಇತರರಿಗೆ ಸೂಚಿಸಿದ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ, ಯಾವುದೇ ಕಣ್ಣಿನ ತೊಂದರೆಗಳಿಗೆ ಬಳಸಬಾರದು.
4. ದಿನಕ್ಕೆ ಒಂದು ಬಾರಿ ತಲೆ, ಕಿವಿ, ಪಾದಗಳಿಗೆ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿ ಮಸ್ಸಾಜ್ ಮಾಡುವುದು ದೃಷ್ಟಿಗೆ ಒಳ್ಳೆಯದು.
5. ಕಣ್ಣಿಗೆ ಅತಿಯಾದ ಶಾಖ ಎಂದಿಗೂ ಒಳ್ಳೆಯದಲ್ಲ. ಮುಖಕ್ಕೆ ಆವಿ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು ಒಳ್ಳೆಯದು.
6.ಕರಿದ ಪದಾರ್ಥ, ಬೇಕರಿ ತಿಂಡಿ, ಮೀನು, ಮೊಟ್ಟೆ, ಮಾಂಸ, ಪನೀರ್, ಚೀಸ್, ಪಾನಿಪೂರಿ, ಗೋಬಿಮಂಚೂರಿ, ಕೃತಕ ತಂಪುಪಾನೀಯಗಳು ದೃಷ್ಟಿನಾಶಕ್ಕೆ ಕಾರಣವಾಗಬಹುದು.
7.ಬೆಳಿಗ್ಗೆ ಹಲ್ಲುಜ್ಜಿದ ನಂತರ, ಮುಚ್ಚಿದ ಕಣ್ಣುರೆಪ್ಪೆಗಳ ಮೇಲೆ ಹದವಾದ ಬಿಸಿನೀರು ಅಥವಾ ತಣ್ಣೀರನ್ನು ಎರಚಿಕೊಳ್ಳುವುದು ಕಣ್ಣಿಗೆ ರಕ್ಷಣೆ.
8. ಅರ್ಧದಿಂದ ಒಂದು ಚಮಚ ನೆಲ್ಲಿಕಾಯಿ ಚೂರ್ಣವನ್ನು ಅಗತ್ಯವಿದ್ದಷ್ಟು ಜೇನನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಕಣ್ಣಿಗಷ್ಟೇ ಅಲ್ಲ, ಒಟ್ಟು ಆರೋಗ್ಯಕ್ಕೆ ಉತ್ತಮ.
9. ಕಣ್ಣಿಗೆ ಮತ್ತು ತುಟಿಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಮಿಶ್ರಿತ ಸೌಂದರ್ಯ ಸಾಧನಗಳನ್ನು ಬಳಸಬೇಡಿ.
10. ಒಂದು ಬಟ್ಟಲು ಶುದ್ಧ ನೀರಿನಲ್ಲಿ ಜಾಜಿ ಮಲ್ಲಿಗೆ, ಗುಲಾಬಿ, ದಾಸವಾಳ, ತಾವರೆದಳ, ನಂದಿಬಟ್ಟಲು ತಾಜಾ ಹೂವುಗಳನ್ನು ಮುಳುಗಿಸಿಟ್ಟು, ಅರ್ಧಗಂಟೆಯ ನಂತರ ಕಣ್ಣುಗಳಿಗೆ ಮೆತ್ತಗೆ ಸೋಕಿಸುವುದು, ರೆಪ್ಪೆಗಳ ಮೇಲೆ ಸವರುವುದು ಮಾಡಬೇಕು. ದಿನದಲ್ಲಿ ನಾಲ್ಕಾರು ಬಾರಿ ಇದನ್ನು ಪುನರಾವರ್ತಿಸಬಹುದು. ಪ್ರತೀದಿನ ಹೊಸದಾಗಿ ಈ ರೀತಿ ನೀರನ್ನು ಸಿದ್ಧಪಡಿಸಬೇಕು. ಕಣ್ಣಿನ ಉರಿ, ಚುಚ್ಚಿದಂತಹ ನೋವು ಕಡಿಮೆಯಾಗುವುದು.
11. ತ್ರಿಫಲಾದಿ ತೈಲ, ಭೃಂಗರಾಜ ತೈಲಗಳಿಂದ ನೆತ್ತಿಗೆ ಅಭ್ಯಂಗ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕಣ್ಣಿಗೂ, ಮಸ್ತಿಷ್ಕಕ್ಕೂ ಹಿತ.
12. ಎರಡೂ ಅಂಗೈಗಳನ್ನು ಪರಸ್ಪರ ಉಜ್ಜಿಕೊಂಡು, ಮುಚ್ಚಿದ ಕಣ್ಣುರೆಪ್ಪೆಗಳ ಮೇಲೆ ಮೂವತ್ತು ಸೆಕೆಂಡುಗಳ ಕಾಲ ಇರಿಸಬೆಕು. ರೆಪ್ಪೆಗಳ ಮೇಲೆ ಹೆಚ್ಚು ಒತ್ತಡ ಹಾಕಬಾರದು. ದಿನಕ್ಕೆ ನಾಲ್ಕಾರು ಬಾರಿ ಇದನ್ನು ಮಾಡಬೇಕು.
13. ಕಣ್ಣಿಗೆ ಧೂಳು, ಮರಳು ಅಥವಾ ಯಾವುದೇ ಕಸ ಬಿದ್ದರೆ ಕಣ್ಣನ್ನು ಉಜ್ಜಲೇಬಾರದು. ನೀರಿನಿಂದ ಚೆನ್ನಾಗಿ ತೊಳೆಯಿರಿ. ರೆಪ್ಪೆಯ ಒಳಗೆ ಇದ್ದರೆ ಹತ್ತಿಯಿಂದ ಒರೆಸಿ ತೆಗೆಯಿರಿ. ತೆಗೆದ ಮೇಲೆ ಊತ, ಉರಿ, ಸ್ರಾವ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಯಾವುದೇ ರಾಸಾಯನಿಕ ವಸ್ತು ಬಿದ್ದರೆ, ನೀರಿನಿಂದ ನಿರಂತರ, ಧಾರೆಯ ರೂಪದಲ್ಲಿ ಕಣ್ಣನ್ನು ಶುದ್ಧಗೊಳಿಸುವುದು ತುಂಬಾ ಮುಖ್ಯ.
14. ಮಕ್ಕಳ ಕಣ್ಣಿನ ಬಳಿ ಚೂಪಾದ ವಸ್ತುಗಳನ್ನು ಒಯ್ಯಲೇಬಾರದು. ಹೊಲಿಯುವಾಗ, ಕತ್ತರಿಸುವಾಗ ಮಕ್ಕಳನ್ನು ದೂರವಿರಿಸಬೇಕು. ಔಷಧ, ಕೀಟನಾಶಕ, ವಿದ್ಯುತ್-ತಾಂತ್ರಿಕ ಉಪಕರಣಗಳನ್ನು ಮಕ್ಕಳಿಗೆ ಸಿಗದಂತಹ ಜಾಗದಲ್ಲಿ ಇಡಬೇಕು.
15. ಸಕ್ಕರೆ ಕಾಯಿಲೆ, ರಕ್ತದೊತ್ತಡ, ರುಮಾಟಾಯ್ಡ್ ಕಾಯಿಲೆ, ಥೈರಾಯ್ಡ್ ಸಮಸ್ಯೆಗಳನ್ನು ಹತೋಟಿಯಲ್ಲಿಡಬೇಕು.
16. ಸೂಕ್ಷ್ಮ ಅಕ್ಷರದಲ್ಲಿ ಬರೆದಿರುವ ಪುಸ್ತಕ, ನ್ಯೂಸ್ ಪೇಪರನ್ನು ತುಪ್ಪದ ದೀಪದ ಬೆಳಕು ಅಥವಾ ಕ್ಯಾಂಡಲ್ ಬೆಳಕಿನಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ಓದಬೇಕು.
17. ನಿತ್ಯ ಕಣ್ಣು ರೆಪ್ಪೆಗಳ ಮೇಲೆ ಮತ್ತು ಸುತ್ತಲೂ ಹರಳೆಣ್ಣೆಯನ್ನು ಹಚ್ಚುವುದರಿಂದ, ರೆಪ್ಪೆಗಳು ಸದೃಢವಾಗುತ್ತವೆ.
18. ಹತ್ತಿಯನ್ನು ಪನ್ನೀರಿನಲ್ಲಿ ಅದ್ದಿ, ರೆಪ್ಪೆಗಳ ಮೇಲೆ ಇಡುವುದರಿಂದ, ಕಣ್ಣಿಗೆ ವಿಶ್ರಾಂತಿ ಮತ್ತು ಹಿತ ಅನುಭವ ಆಗುವುದು.
19. ತುರಿದ ಆಲೂಗಡ್ಡೆ ಅಥವಾ ಸಣ್ಣಗೆ ಹಚ್ಚಿದ ಸೌತೇಕಾಯಿಯನ್ನು , ಕಣ್ಣುಗಳನ್ನು ಮುಚ್ಚಿ ರೆಪ್ಪೆಗಳ ಮೇಲೆ ಹತ್ತು ನಿಮಿಷ ಇಟ್ಟಲ್ಲಿ ಕಣ್ಣಿನ ಆಯಾಸ ಪರಿಹಾರವಾಗುವುದು, ಸುತ್ತಲಿನ ಕಪ್ಪು ವರ್ತುಲ ಕಡಿಮೆ ಆಗುವುದು.
20. ಸ್ಟಿರಾಯ್ಡ್ ಔಷಧ, ಆಂಟಿಬಯೋಟಿಕ್, ಮೊಡವೆಗೆ ಬಳಸುವ ಐಸೋಟ್ರೆಟಿನೋಯಿನ್, ಅಲರ್ಜಿಗೆ ಬಳಸುವ ಸಿಟ್ರಿಜಿನ್ ಇತ್ಯಾದಿ ಆಂಟಿಹಿಸ್ಟಾಮಿನ್, ಗರ್ಭನಿರೋಧಕ ಗುಳಿಗೆಗಳು, ನೋವಿನ ಮಾತ್ರೆಗಳು, ಹಾರ್ಮೋನು ಗುಳಿಗೆಗಳಿಂದ ದೂರವಿರಿ. ಕಣ್ಣಿನ ಪೊರೆ, ಗ್ಲೂಕೋಮಾ ಇತ್ಯಾದಿ ಸಮಸ್ಯೆಗೆ ಕಾರಣವಾಗಬಹುದು.
21. ಕಂಪ್ಯೂಟರ್, ಮೊಬೈಲ್ ಬಳಸುವಾಗ ಬ್ಲೂರೇ ಕಟ್ ಕನ್ನಡಕ ಬಳಸಿ.
22.ಟಿ.ವಿ., ಮೊಬೈಲ್ ಬಳಸುತ್ತಿರುವಾಗ ರೆಪ್ಪೆ ಮುಚ್ಚಿ ತೆರೆಯುವ ಕಣ್ಣಿನ ಸಹಜ ಕ್ರಿಯೆ ಮೊಟಕುಗೊಳ್ಳದಂತೆ ಅರಿವಿನಿಂದ ಇರಬೇಕು.
23. ಕಂಪ್ಯೂಟರ್ ಟೇಬಲ್ ಮೇಲೆ ಕಣ್ಣಿನ ಮಟ್ಟದಲ್ಲಿರಬೇಕು.
24. ಕಣ್ಣಿನ ಶಕ್ತಿ ಕಾಪಾಡಿಕೊಳ್ಳಲು ವರ್ಷಕ್ಕೊಮ್ಮೆ ಆಯುರ್ವೇದದಲ್ಲಿ ಹೇಳಲಾದ ತರ್ಪಣ ಕರ್ಮ ಥೆರಪಿಗೆ ಒಳಗಾಗಿ. ಅದು ನಿಮ್ಮ ಕನ್ನಡಕದ ಪವರ್ ಹೆಚ್ಚಾಗದಂತೆ ನೋಡಿಕೊಳ್ಳುವುದು.
25. ಕಣ್ಣಿನ ಪೊರೆ, ರೆಟಿನಾ ಸಮಸ್ಯೆ, ಕಣ್ನು ಉರಿ, ನವೆ, ನೋವು, ಕಣ್ಣಿನಿಂದ ನೀರು ಇಳಿಯುವುದು, ಕಣ್ಣೀರಿನ ಪದರ ಓಣಗುವ ಡ್ರೈ ಐ ಸಿಂಡ್ರೋಮ್ ಇತ್ಯಾದಿ ಯಾವುದೇ ಸಮಸ್ಯೆಗಳಿಗೆ ಕೇವಲ ಆಧುನಿಕ ಪದ್ಧತಿಯಲ್ಲಿ ಮಾತ್ರ ಚಿಕಿತ್ಸೆ ಇದೆಯೆಂಬ ಭ್ರಮೆಯಿಂದ ಹೊರಬನ್ನಿ. ಅಯುರ್ವೇದದಲ್ಲಿ ವಿಶೇಷ ಚಿಕಿತ್ಸಾ ವಿಧಾನಗಳ ಮೂಲಕ ಯಶಸ್ವಿಯಾಗಿ ಗುಣಪಡಿಸಲಾಗಿದೆ.