ಕೊಡಗು: ತಾಯಿಗೆ 7 ಲಕ್ಷ ರೂ ಜೀವನಾಂಶ ಪಾವತಿಸುವಂತೆ ಮಗ-ಮೊಮ್ಮಗಳಿಗೆ ಕೋರ್ಟ್ ಆದೇಶ..! 22 ಎಕರೆ ಕಾಫಿ ಎಸ್ಟೇಟ್ ಅನ್ನು ಅನುಮತಿ ಇಲ್ಲದೆ ಮಾರಲು ಯತ್ನಿಸಿದ ಮಗ..!

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ 85 ವರ್ಷದ ಅಪ್ಪಾರಂಡ ಶಾಂತಿ ಬೋಪಣ್ಣ ಅವರ ಜೀವನ ನಿರ್ವಹಣೆಗೆ ವಾರ್ಷಿಕ ತಲಾ 7 ಲಕ್ಷ ರೂ. ಪಾವತಿಸುವಂತೆ ಅವರ ಮಗ ಮತ್ತು ಮೊಮ್ಮಗಳಿಗೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಏಕಸದಸ್ಯಪೀಠದ ಆದೇಶ ರದ್ದು ಕೋರಿ ಶಾಂತಿ ಬೋಪಣ್ಣ ಅವರ ಮಗ ಎ.ಬಿ. ಗಣಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸಿಜೆ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಹೆರೂರು ಎಸ್ಟೇಟ್‌ ನ ಅಪ್ಪಾರಂಡ ಶಾಂತಿ ಬೋಪಣ್ಣ ತಾವು ಹೊಂದಿದ್ದ 22 ಎಕರೆ ಕಾಫಿ ಎಸ್ಟೇಟ್ ಅನ್ನು ತಮ್ಮ ಮಗ ಎ.ಬಿ. ಗಣಪತಿ ಹಾಗೂ ಮೊಮ್ಮಗಳಾದ ಪೂಜಾ ಅಲಿಯಾಸ್ ಸಂಜನಾ ಸುಬ್ಬಯ್ಯಗೆ 2016 ರಲ್ಲಿ ‘ದಾನಪತ್ರ’ದ ರೂಪದಲ್ಲಿ ನೀಡಿದ್ದರು. ಆಗ ಅಪ್ಪಾರಂಡ ಶಾಂತಿ ಬೋಪಣ್ಣ ಜೀವನ ನಿರ್ವಹಣೆಗೆ ವಾರ್ಷಿಕ ತಲಾ 7 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸುವುದಾಗಿ ಗಣಪತಿ ಹಾಗೂ ಸಂಜನಾ ಭರವಸೆ ನೀಡಿದ್ದರು. ಅಂತೆಯೇ, 2016ರಿಂದ 2019ರವರೆಗೆ ಹಣ ಪಾವತಿಸಿದ್ದರು. ತದನಂತರ ಹಣ ನೀಡಿರಲಿಲ್ಲ. ಈ ಮಧ್ಯೆ ಗಣಪತಿ ಹಾಗೂ ಸಂಜನಾ ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಸಂಗತಿ ಶಾಂತಿ ಬೋಪಣ್ಣ ಗಮನಕ್ಕೆ ಬಂದಿತ್ತು. ಹಾಗಾಗಿ, ದಾನಪತ್ರ ರದ್ದುಪಡಿಸಬೇಕೆಂದು ಕೋರಿ ಅವರು, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಮಂಡಳಿಯ ಪ್ರತಿನಿಧಿಯೂ ಆದ ಕೊಡಗು ಜಿಲ್ಲೆಯ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿ 2021ರ ಸೆ. 15ರಂದು ದಾನಪತ್ರ ರದ್ದುಗೊಳಿಸಿದ್ದನ್ನು ಜಿಲ್ಲಾಧಿಕಾರಿ ಆಸ್ತಿ ಹಕ್ಕನ್ನು ಮರು ಸ್ಥಾಪಿಸಲು ಆದೇಶಿಸಿ, ವೃದ್ಧ ತಾಯಿಯ ಜೀವಿತಾವಧಿವರೆಗೆ ವಾರ್ಷಿಕ ಜೀವನಾಂಶ ಪಾವತಿಸಲು ನಿರ್ದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಶಾಂತಿ ಬೋಪಣ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಹೈಕೋರ್ಟ್ ತಾಯಿಗೆ ಜೀವನಾಂಶ ಪಾವತಿಸುವುದು ಸರಿ ಎಂದು ಹೇಳಿದೆ. Click