ನ್ಯೂಸ್ ನಾಟೌಟ್: ಸಚಿವ ಬೈರತಿ ಸುರೇಶ್ ಸಿಎಂ ಸಿದ್ಧರಾಮಯ್ಯ ಅವರ ಅಕ್ರಮಗಳಿಗೆ ಸಹಾಯ ಮಾಡಿದ್ದಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದರು. ಈಗ ಶೋಭಾ ಕರಂದ್ಲಾಜೆ ಮತ್ತು ಸಚಿವ ಬೈರತಿ ಸುರೇಶ್ ನಡುವಿನ ವಾಕ್ಸಮರ ಜೋರಾಗಿದೆ. ‘ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿʼ ಎಂದು ಶೋಭಾ ಕರಂದ್ಲಾಜೆ ಸಚಿವ ಭೈರತಿ ಸುರೇಶ್ ಗೆ ಸವಾಲು ಹಾಕಿದ್ದಾರೆ.
ಇಂದು(ಅ.27) ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಸಚಿವ ಭೈರತಿ ಸುರೇಶ್ ಅವರು ಮುಡಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಕಡತಗಳನ್ನು ತಂದು, ಸುಟ್ಟು ಹಾಕಿದ್ದಾರೆ. ಅದರ ಬಗ್ಗೆ ನಾನು ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಬೇರೆ ಬೇರೆ ಆರೋಪಗಳನ್ನು ಅವರು ಮಾಡುತ್ತಿದ್ದಾರೆʼ ಎಂದು ಕಿಡಿಕಾರಿದರು.
ʼಶೋಭಾ ಕರಂದ್ಲಾಜೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಮಾಡುವುದು ಇಲ್ಲ. ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರನ್ನು ನೇಮಿಸಲಾಗಿದೆ. ಆದರೆ, ಪೊನ್ನಣ್ಣ ಅವರಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ನಕಲಿ ಕಡತ ಸೃಷ್ಟಿಸಲು ಪೊನ್ನಣ್ಣ ಅವರಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ಇಲ್ಲಿಯೂ ಒಂದು ಭ್ರಷ್ಟಾಚಾರ ಮಾಡಲು ಹೊರಟಿದ್ದೀರಿ. ನಿಮ್ಮ ಬಳಿ ಇರುವ ದಾಖಲೆ ತಕ್ಷಣವೇ ಹೊರಗೆ ಹಾಕಿʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಮುಡಾ ಹರಗಣದ ಕುರಿತು ತನಿಖೆ ಈಗಾಗಲೇ ಆರಂಭವಾಗಿದೆ. ಈ ಭಯದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಸಚಿವ ಭೈರತಿ ಸುರೇಶ್ ಅವರಿಗೆ ಈಗ ಸಂಕಷ್ಟ ಶುರುವಾಗಿದೆ. ಅವರು ಮೈಸೂರಿನಿಂದ ಕಡತ ತಂದಿದ್ದು ಸತ್ಯ. ಸುಟ್ಟು ಹಾಕಿದ್ದು ಸತ್ಯʼ ಎಂದು ಆರೋಪಿಸಿದರು.
Click