ಮನೆಯೊಳಗೆಯೇ ಮಗ ಸತ್ತರೂ ಅಂಧ ದಂಪತಿ ಊಟಕ್ಕಾಗಿ 4 ದಿನದಿಂದ ಕಾಯುತ್ತಿದ್ದರು..! ಇಲ್ಲಿದೆ ಮನಕಲಕುವ ಘಟನೆ..!

ನ್ಯೂಸ್ ನಾಟೌಟ್‌ : ದೃಷ್ಟಿದೋಷವುಳ್ಳ ವೃದ್ಧ ದಂಪತಿ ಹೈದರಬಾದ್ ನ ನಾಗೋಲ್‌ (Nagole) ಎಂಬಲ್ಲಿನ ತಮ್ಮ ಮನೆಯಲ್ಲಿ ಪುತ್ರ ಸಾವನ್ನಪ್ಪಿರುವ ವಿಚಾರ ತಿಳಿಯದೆ ನಾಲ್ಕು ದಿನಗಳ ಕಾಲ ಕಿರಿಯ ಪುತ್ರನ ಶವದೊಂದಿಗೆ ವಾಸವಾಗಿದ್ದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದವರು ನಾಗೋಲ್ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ದಂಪತಿ ಕೆ ರಮಣ (60) ಮತ್ತು ಕೆ ಶಾಂತಾ ಕುಮಾರಿ (65) ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದು, ಬಾಯಿಯಿಂದ ನೊರೆ ಬರುತ್ತಿರುವುದನ್ನು ಕಂಡಿದ್ದಾರೆ. ಸೋಮವಾರ ಮಧ್ಯಾಹ್ನ, ಪೊಲೀಸರು ನಾಗೋಲ್‌ ನ ಬ್ಲೈಂಡ್ಸ್ ಕಾಲೋನಿಯ ಸ್ಥಳೀಯರಿಂದ ಕರೆ ಸ್ವೀಕರಿಸಿದರು. ಪೊಲೀಸರು ಮನೆಗೆ ಪ್ರವೇಶಿಸಿದ ನಂತರ ಮೂವರು ವ್ಯಕ್ತಿಗಳು ಕಂಡುಬಂದರು. ದಂಪತಿಯ ಪುತ್ರ ಕೆ ಪ್ರಮೋದ್ (30) ಮೃತಪಟ್ಟಿದ್ದು, ಅವರ ದೇಹ ಕೊಳೆತ ಸ್ಥಿತಿಯಲ್ಲಿತ್ತು, ವೃದ್ಧ ದಂಪತಿ ಅಲ್ಲೇ ನೊರೆ ಕಾರಿದಂತೆ ಬಿದ್ದಿದ್ದರು. ನಾಲ್ಕು ದಿನಗಳ ಹಿಂದೆ ಪ್ರಮೋದ್ ತನ್ನ ಪೋಷಕರಿಗೆ ರಾತ್ರಿ ಊಟ ಬಡಿಸಿ ನಿದ್ರೆಗೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮೋದ್ ನಿದ್ರೆಯಲ್ಲಿಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ. ಕಣ್ಣು ಕಾಣದ ದಂಪತಿಗೆ ಮಗ ತೀರಿಕೊಂಡಿದ್ದರಿಂದ ನಾಲ್ಕು ದಿನ ಊಟ, ನೀರು ಇರಲಿಲ್ಲ, ಹೀಗಾಗಿ ಪ್ರಜ್ಞಾಹೀನರಾಗಿದ್ದರು ಎನ್ನಲಾಗಿದೆ. ಕಿರಿಯ ಮಗ ರಾಮಣ್ಣ ಗಿರಿಜನ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಕ್ಕ ಹಣದಲ್ಲಿ ಕುಡಿಯುತ್ತಿದ್ದ ಎನ್ನಲಾಗಿದೆ. ಆತನಿಗೆ ಪಿಟ್ಸ್ ಇತ್ತು, ಹಾಗಾಗಿ ಕುಡಿದು ಮಲಗಿದವನಿಗೆ ಪಿಟ್ಸ್ ಬಂದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಇದನ್ನು ತಿಳಿಯದ ಆತನ ತಂದೆ-ತಾಯಿ ಮಗ ಬಂದು ಆಹಾರ ನೀಡುತ್ತಾನೆಂದು ಕಾಯುತ್ತಿದ್ದರು, ಕೊನೆಗೆ ಅನ್ನ-ನೀರಿಲ್ಲದೆ ಪ್ರಜ್ಞೆ ತಪ್ಪಿದ್ದಾರೆ ಎನ್ನಲಾಗಿದೆ. Click