ಹೆಲಿಕಾಪ್ಟರ್ ಪತನ, 3 ಮಂದಿಯ ದುರಂತ ಸಾವು..! ಖಾಸಗಿ ಹೆಲಿಕಾಪ್ಟರ್‌ ದುರಂತಕ್ಕೆ ಕಾರಣವೇನು..?

ನ್ಯೂಸ್ ನಾಟೌಟ್ : ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೂವರು ಸಾವನ್ನಪ್ಪಿದ ಘಟನೆ ಪುಣೆ ಸಮೀಪದ ಬವ್‌ಧಾನ್‌ನಲ್ಲಿ ಇಂದು(ಅ.02) ನಡೆದಿದೆ. ಖಾಸಗಿ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಎಂಜಿನಿಯರ್ ಇದ್ದರು ಎಂದು ತಿಳಿದು ಬಂದಿದೆ. ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ 6:45ರ ಸುಮಾರಿಗೆ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಆಕ್ಸ್‌ಫರ್ಡ್ ಗಾಲ್ಫ್ ಕ್ಲಬ್‌ನ ಹೆಲಿಪ್ಯಾಡ್‌ನಿಂದ ಟೇಕಾಫ್ ಆಗಿದ್ದು, ಆ ಪ್ರದೇಶದಲ್ಲಿ ದಟ್ಟವಾದ ಮಂಜಿನಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.