ನ್ಯೂಸ್ ನಾಟೌಟ್: ಬಸ್ ನಿರ್ವಾಹಕನೇ ಟಿಕೆಟ್ ಹಣ ಕೊಡಿ ಎಂದು ಬಾಯ್ಬಿಟ್ಟು ಕೇಳಿದರೂ ಲೇಡಿ ಕಾನ್ ಸ್ಟೇಬಲ್ ಒಬ್ಬರು ಟಿಕೆಟ್ ದರ ನೀಡಲು ನಿರಾಕರಿಸಿದ್ದಾರೆ.
“ನಾನು ಪೊಲೀಸ್ ನಾನ್ಯಾಕೆ ಹಣ ನೀಡ್ಬೇಕು” ಎಂದು ಕಂಡಕ್ಟರ್ ಬಳಿ ದರ್ಪ ತೋರಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್ ಲೇಡಿ ಕಾನ್ ಸ್ಟೇಬಲ್ ಗೆ ದಂಡ ವಿಧಿಸಿದ್ದು, ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಹರಿಯಾಣದ ರೇವಾರಿಯ ಧುರುಹೇರಾ ಎಂಬಲ್ಲಿ ನಡೆದಿದೆ. ಇಲ್ಲಿ ರಾಜಸ್ಥಾನ ರೋಡ್ ವೇಸ್ ಬಸ್ಸಿನಲ್ಲಿ ಧರುಹೇರಾವರೆಗೆ ಪ್ರಯಾಣಿಸುತ್ತಿದ್ದ ಹರಿಯಾಣದ ಮಹಿಳಾ ಕಾನ್ಸ್ಟೇಬಲ್ 50 ರೂ. ಟಿಕೆಟ್ ಹಣವನ್ನು ನೀಡಲು ನಿರಾಕರಿಸಿದ್ದಾರೆ. ಕಂಡಕ್ಟರ್ ಪದೇ ಪದೇ ಟಿಕೆಟ್ ಹಣ ಕೇಳಿದರೂ ನಾನು ಪೊಲೀಸ್ ಹಾಗಾಗಿ ಹಣ ನೀಡುವುದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್ ಲೇಡಿ ಕಾನ್ ಸ್ಟೇಬಲ್ಗೆ ದಂಡ ವಿಧಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಪೇದೆಗೆ ದಂಡ ವಿಧಿಸಿದ್ದಕ್ಕೆ ಕೋಪಗೊಂಡ ಹರಿಯಾಣದ ಪೊಲೀಸರು ಪ್ರಮಾಣ ಪತ್ರ ಇಲ್ಲ, ಕಂಡಕ್ಟರ್, ಡ್ರೈವರ್ ಸರಿಯಾಗಿ ಸಮವಸ್ತ್ರ ಧರಿಸಿಲ್ಲ, ಟೈರ್ ಗಳಲ್ಲಿ ಗಾಳಿಯಿಲ್ಲ ಎಂಬಿತ್ಯಾದಿ ಕಾರಣಗಳನ್ನು ಹುಡುಕಿ ರಾಜಸ್ಥಾನದ ಮಾರ್ಗದಲ್ಲಿ ಚಲಿಸುವ 90 ಬಸ್ಗಳಿಗೆ ದಂಡ ವಿಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ರಾಜಸ್ಥಾನದಲ್ಲೂ ಕೂಡಾ ಹರಿಯಾಣದ 26 ಬಸ್ ಗಳಿಗೆ ದಂಡ ವಿಧಿಸಲಾಗಿದೆ. ಈ ಗಲಾಟೆ ರಾಜಸ್ಥಾನ ಮತ್ತು ಹರಿಯಾಣದಲ್ಲಿ ಭಾರೀ ಕೋಲಾಹಲವನ್ನು ಉಂಟು ಮಾಡಿದ್ದು, ಇದೀಗ ರಾಜಸ್ಥಾನದ ಸಾರಿಗೆ ಇಲಾಖೆಯ ಅಧಿಕಾರಿಗಳು ಹರಿಯಾಣದ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ತಿಳಿಗೊಳಿಸುವ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.