ನ್ಯೂಸ್ ನಾಟೌಟ್: ಕೃಷಿಯಲ್ಲಿ ಉಪಬೆಳೆಯಾಗಿ ಹಲವಾರು ಪ್ರಯೋಗಗಳನ್ನು ಮಾಡುವುದು ಸಹಜ. ಆದರೆ ಇಲ್ಲೊಬ್ಬ ವ್ಯಕ್ತಿ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಘಟನೆ ನಡೆದಿರುವುದು ಮಡಿಕೇರಿಯ ಎಮ್ಮೆಮಾಡು ಗ್ರಾಮದಲ್ಲಿ. ಇಲ್ಲಿನ ಕನ್ನಡಿಯಂಡ ಮಹಮ್ಮದ್ ಕೆ.ಎಂ.(43) ಎಂಬಾತ ಕಾಫಿ ತೋಟದ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 35 ಕೆ.ಜಿ. 675 ಗ್ರಾಂ ಹಸಿ ಗಾಂಜಾ ಮತ್ತು 275 ಗ್ರಾಂ ಒಣ ಗಾಂಜಾವನ್ನು ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ನಿರ್ದೇಶನದ ಮೇರೆಗೆ ಡಿವೈಎಸ್ಪಿ ರವಿ, ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪ ಅವರ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದೆ.