ನ್ಯೂಸ್ ನಾಟೌಟ್: ಈಶಾ ಫೌಂಡೇಷನ್ (Isha Foundation) ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಕೊಯಮತ್ತೂರು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ, ತೊಂಡಮತ್ತೂರ್ನಲ್ಲಿರುವ ಪ್ರತಿಷ್ಠಾನದ ಆಶ್ರಮದ ಮೇಲೆ ಮಂಗಳವಾರ ಸುಮಾರು 150 ಪೊಲೀಸ್ ಸಿಬ್ಬಂದಿ ಈಶಾ ಫೌಂಡೇಷನ್ ಮೇಲೆ ರೈಡ್ ಮಾಡಿದ್ದಾರೆ.
ಸಹಾಯಕ ಉಪಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿ ಮತ್ತು ಮೂವರು ಡಿಎಸ್ಪಿಗಳ ನೇತೃತ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ ಎಂದು ವರದಿ ತಿಳಿಸಿವೆ.
ಈ ಶೋಧ ಕಾರ್ಯಾಚರಣೆಯು ಆಶ್ರಮದ ಕೊಠಡಿಗಳಲ್ಲಿನ ತಪಾಸಣೆಯ ಜತೆಗೆ, ಆಶ್ರಮದಲ್ಲಿರುವ ವ್ಯಕ್ತಿಗಳ ಕೂಲಂಕಷ ಪರಿಶೀಲನೆ ಉದ್ದೇಶ ಹೊಂದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಕೋರ್ಟ್ ಆದೇಶಕ್ಕೆ ಅನುಸಾರವಾಗಿ, ಎಸ್ಪಿ ಸೇರಿದಂತೆ ಪೊಲೀಸರು ಸಾಮಾನ್ಯ ವಿಚಾರಣೆಗಾಗಿ ಈಶಾ ಯೋಗ ಕೇಂದ್ರಕ್ಕೆ ಆಗಮಿಸಿದ್ದರು. ಇಲ್ಲಿನ ನಿವಾಸಿಗಳು ಮತ್ತು ಸ್ವಯಂ ಕಾರ್ಯಕರ್ತರ ಜೀವನಶೈಲಿಯನ್ನು ಅರಿತುಕೊಳ್ಳಲು ಹಾಗೂ ಅವರು ಇಲ್ಲಿಗೆ ಹೇಗೆ ಬಂದರು ಮತ್ತು ಉಳಿದುಕೊಂಡರು ಇತ್ಯಾದಿಗಳನ್ನು ತಿಳಿಯಲು ಅವರನ್ನು ವಿಚಾರಿಸಿದರು” ಎಂದು ಈಶಾ ಯೋಗ ಕೇಂದ್ರ ಹೇಳಿದೆ.
ಸನ್ಯಾಸಿನಿಯರಂತೆ ಬದುಕಲು ಯುವತಿಯರನ್ನು ಪ್ರಚೋದಿಸುತ್ತಿರುವುದು ಏಕೆ ಎಂದು ಈಶಾ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಪೊಲೀಸ್ ದಾಳಿ ನಡೆದಿದೆ.
ನಿವೃತ್ತ ಪ್ರೊಫೆಸರ್ ಡಾ ಎಸ್ ಕಾಮರಾಜ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಸದ್ಗುರು ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಗೀತಾ (42) ಮತ್ತು ಲತಾ (39) ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಈಶಾ ಫೌಂಡೇಷನ್ನಲ್ಲಿ ಬಂಧಿಸಿಡಲಾಗಿದೆ ಎಂದು ಅವರು ಆರೋಪಿಸಿದ್ದರು. ತಮ್ಮ ಸಹಜ ಜೀವನವನ್ನು ತ್ಯಜಿಸುವಂತೆ ಬ್ರೈನ್ವಾಶ ಮಾಡಿರುವುದಲ್ಲದೆ, ಸನ್ಯಾಸಿಗಳಂತೆ ಜೀವನ ಶೈಲಿ ಅಳವಡಿಸಿಕೊಳ್ಳಲು ಮತ್ತು ಕುಟುಂಬದಿಂದ ಸಂಪರ್ಕ ಕಡಿದುಕೊಳ್ಳಲು ಅವರ ಮೇಲೆ ಬಲವಂತ ಮಾಡಲಾಗಿದೆ ಎಂದು ದೂರಿದ್ದರು.
Click