ನ್ಯೂಸ್ ನಾಟೌಟ್: ನೌಕಾನೆಲೆಯ ಪ್ರದೇಶ ಬಳಿ ಮಂಗಳವಾರ(ಅ.9) ರಾತ್ರಿ ಅಪರಿಚಿತ ಡ್ರೋನ್ ಹಾರಾಡಿದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾದ ವಕ್ಕನಳ್ಳಿ ಬಳಿಯ ಕದಂಬ ನೌಕಾನೆಲೆ ಈ ಘಟನೆ ನಡೆದಿದೆ.
ಅಪರಿಚಿತ ಡ್ರೋನ್ ಹಾರಾಟ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ವಕ್ಕನಳ್ಳಿಯ ಐಎನ್ಎಸ್ ಪತಂಜಲಿ ಆಸ್ಪತ್ರೆಯ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಾಡಿದೆ.
ಸುರಕ್ಷತೆಯ ದೃಷ್ಟಿಯಿಂದ ನೌಕಾ ನೆಲೆ ಪ್ರದೇಶದಲ್ಲಿ ಡ್ರೋನ್ ಹಾಗೂ ಕ್ಯಾಮರಾ ಬಳಕೆಗೆ ನಿಷೇಧಸಲಾಗಿದೆ. ಇದರ ಹೊರತಾಗಿಯೂ ಡ್ರೋನ್ ಹಾರಾಡಿದೆ. ಡ್ರೋನ್ ಹಾರಾಟದ ವಿಡಿಯೋವನ್ನು ಸ್ಥಳಿಯರು ನೌಕಾನೆಲೆ ಅಧಿಕಾರಿಗಳಿಗೆ ನೀಡಿ, ಗಮನಕ್ಕೆ ತಂದಿದ್ದಾರೆ.
ಸುಮಾರು 2-3 ಕಿ.ಮೀ ಎತ್ತರದಲ್ಲಿ ನೈಟ್ ವಿಶನ್ ಡ್ರೋನ್ ಹಾರಾಡಿದ್ದು, ಹಲವು ಸಂಶಯಕ್ಕೆ ಕಾರಣಾಗಿದೆ. ಸಾಮಾನ್ಯವಾಗಿ 600 ದಿಂದ 1,200 ಮೀ ಎತ್ತರ ಹಾರುವ ಡ್ರೋನ್ ಸ್ಥಳೀಯವಾಗಿ ಬಳಕೆ ಮಾಡಲಾಗುತ್ತೆ. ಆದರೆ, ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಾಡಿರುವುದು ಸಂಶಯಕ್ಕೆ ಕಾರಣವಾಗಿದೆ.
ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ನೌಕಾಪಡೆ, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಗಳು ಮುಂದಾಗಿವೆ. ಗುಪ್ತಚರ ಇಲಾಖೆ ಅಧಿಕಾರಿಗಳು ಸ್ಥಳೀಯರಿಂದಲೂ ಮಾಹಿತಿ ಪಡೆಯುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಹಾಗೂ ಎನ್ಹೆಚ್ಎಐಗಳು ಕೂಡ ಡ್ರೋನ್ ಬಳಸಿಲ್ಲ ಎಂದು ಸ್ಪಷ್ಟಪಡಿಸಿವೆ. ಇದರಿಂದ ಸಂಶಯ ದಟ್ಟವಾಗಿದ್ದು ನೌಕಾಪಡೆ ಹಾಗೂ ಗುಪ್ತಚರ ಇಲಾಖೆಗಳಿಂದ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ.