- +91 73497 60202
- [email protected]
- November 24, 2024 5:47 AM
ಮಗಳು ಲೈಂಗಿಕ ದಂಧೆಯಲ್ಲಿದ್ದಾಳೆ ಎಂದು ತಾಯಿಗೆ ಸುಳ್ಳು ಕರೆ..! ಆಘಾತಗೊಂಡು ಸರ್ಕಾರಿ ಶಾಲಾ ಶಿಕ್ಷಕಿ ಸಾವು..!
ನ್ಯೂಸ್ ನಾಟೌಟ್: ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಮಾಲತಿ ವರ್ಮಾ (58) ಅವರಿಗೆ ಸೋಮವಾರ ವಾಟ್ಸಪ್ ಕರೆ ಬಂದಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಚಿತ್ರ ಕಂಡುಬಂದಿದೆ. ಕಾಲೇಜಿನಲ್ಲಿ ಓದುತ್ತಿರುವ ನಿಮ್ಮ ಮಗಳನ್ನು ಲೈಂಗಿಕ ದಂಧೆ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ಮಾಹಿತಿ ನೀಡಿದ್ದ ಎನ್ನಲಾಗಿದೆ. ಈ ಘಟನೆ ಆಗ್ರಾದಲ್ಲಿ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಈ ಕರೆ ಬಂದಿದ್ದು, ಕರೆ ಮಾಡಿ ಯಾವುದೇ ಪ್ರಕರಣ ದಾಖಲಿಸದೇ ನಿಮ್ಮ ಮಗಳು ಸುರಕ್ಷಿತವಾಗಿ ಮನೆ ಸೇರಬೇಕಿದ್ದರೆ ಒಂದು ಖಾತೆಗೆ ಒಂದು ಲಕ್ಷ ರೂಪಾಯಿ ಹಾಕುವಂತೆ ಸೂಚಿಸಿದ್ದ ಎಂದು ಮಾಲತಿ ಅವರ ಮಗ ದೀಪಾಂಶು ಹೇಳಿದ್ದಾರೆ.ಮಗಳು ಲೈಂಗಿಕ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಕುಟುಂಬಕ್ಕೆ ಯಾವುದೇ ಆಘಾತ ಆಗಬಾರದು ಎಂಬ ಉದ್ದೇಶದಿಂದ ಈ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿಕೊಂಡಿದ್ದ. “ನನ್ನ ತಾಯಿ ಆಗ್ರಾದ ಅಚ್ನೇರಾದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಈ ಕರೆ ಬಂದ ಬಳಿಕ ಕಳವಳಗೊಂಡು ನನಗೆ ಕರೆ ಮಾಡಿದರು. ಯಾವ ಸಂಖ್ಯೆಯಿಂದ ಕರೆ ಬಂದಿದೆ ಎಂದು ನೋಡಿದಾಗ +92 ಎಂಬ ಸಂಖ್ಯೆಯೊಂದಿಗೆ ಆರಂಭವಾಗಿತ್ತು. ಇದು ವಂಚನೆಯ ಕರೆ ಎಂದು ತಾಯಿಗೆ ಹೇಳಿದೆ. ಆದರೂ ತೀರಾ ಉದ್ವೇಗದಿಂದ ಇದ್ದ ಅವರು ಅಸ್ವಸ್ಥರಾದರು” ಎಂದು ಆಕೆಯ ಮಗ ದೀಪಾಂಶು ವಿವರಿಸಿದ್ದಾರೆ. “ತಂಗಿಯ ಜತೆಗೂ ಮಾತನಾಡಿದ್ದು, ಆಕೆ ಕಾಲೇಜಿನಲ್ಲಿ ಸುರಕ್ಷಿತವಾಗಿದ್ದಾಳೆ ಎಂದೂ ತಾಯಿಗೆ ತಿಳಿಸಿದ್ದೆ. ಆದರೆ ತಾಯಿಯ ಆರೋಗ್ಯ ಹದಗೆಡುತ್ತಾ ಹೋಗಿದ್ದು, ಶಾಲೆಯಿಂದ ಮನೆಗೆ ಬಂದಾಗ, ಸ್ವಲ್ಪ ನೋವಾಗುತ್ತಿದೆ ಎಂದು ಹೇಳಿದರು. ತಾಯಿಗೆ ಕುಡಿಯಲು ನೀರು ಕೊಟ್ಟೆವು. ಆದರೆ ಆ ಸಂದರ್ಭದಲ್ಲಿ ಅವರು ಕೊನೆಯುಸಿರೆಳೆದರು” ಎಂದು ಮಗ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ