ನ್ಯೂಸ್ ನಾಟೌಟ್: ಖಾಲಿಯಾಗಿದ್ದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಇಂದು(ಅ.22) ಉಪ ಚುನಾವಣೆ ನಡೆದಿದ್ದು, ಶೇಕಡಾ 97.91ರಷ್ಟು ಮತದಾನ ಆಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆದಿದೆ ಎಂದು ವರದಿ ತಿಳಿಸಿದೆ.
2 ಜಿಲ್ಲೆಗಳಲ್ಲಿ 392 ಮತಗಟ್ಟೆ ನಿರ್ಮಿಸಲಾಗಿದ್ದು, ಒಟ್ಟು 6,032 ಮತದಾರರನ್ನು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ ಹೊಂದಿದೆ. ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ. ಅವರ ರಾಜೀನಾಮೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ಪರಿಷತ್ ಸ್ಥಾನ ತೆರವಾಗಿದ್ದಕ್ಕೆ ಈಗ ಉಪಚುನಾವಣೆ ನಡೆದಿದೆ.
ಬಿಜೆಪಿಯಿಂದ ಬಿ.ಆರ್.ಕಿಶೋರ್, ಕಾಂಗ್ರೆಸ್ನಿಂದ ರಾಜು ಪೂಜಾರಿ ಸ್ಪರ್ಧಿಸಿದ್ದರು. ಉಳಿದಂತೆ ಎಸ್ಡಿಪಿಐನಿಂದ ಅನ್ವರ್ ಸಾದತ್, ಪಕ್ಷೇತರ ಸದಸ್ಯ ದಿನಕರ ಉಳ್ಳಾಲ ಸ್ಪರ್ಧಿಸಿದ್ದರು. ಅ.24ರಂದು ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ಕಲಂ 163ರಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಶಾಸಕ ಡಾ.ವೈ.ಭರತ್ ಶೆಟ್ಟಿ, ಐವನ್ ಡಿಸೋಜಾ ಮತ್ತು ಮಂಜುನಾಥ್ ಭಂಡಾರಿ ಮತಪತ್ರದ ಮೂಲಕ ಮತ ಚಲಾಯಿಸಿದ್ದಾರೆ.
ಇನ್ನು ಮತದಾನ ಆರಂಭ ಬಳಿಕ ಮತಗಟ್ಟೆಗೆ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮತದಾನದ ಪ್ರಕ್ರಿಯೆಗಳನ್ನು ಪರಿಶೀಲನೆ ಮಾಡಿದ್ದಾರೆ.
Click