ನ್ಯೂಸ್ ನಾಟೌಟ್ : ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಬಹಿರಂಗವಾಗಿದೆ.ಕುಮಾರಸ್ವಾಮಿ ಹೇಳಿದಂತೆ ಕೊನೆ ಕ್ಷಣದಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇಂದು (ಅಕ್ಟೋಬರ್ 23) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಯೋಗೇಶ್ವರ್ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರಿದ್ದಾರೆ. ಈ ಮೂಲಕ ಯೋಗೇಶ್ವರ್, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ನಿಂದ ಕಣಕ್ಕಿಳಿಯುವುದು ಖಚಿತವಾಗಿದೆ.
ಕಾಂಗ್ರೆಸ್ ಸೇರ್ಪಡೆಗೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ. ವಾಟ್ಸಾಪ್ ಮೂಲಕ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ಈ ದಿನ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಬೇಕೆಂದು ಕೋರುತ್ತೇನೆ. ಇಲ್ಲಿಯವರೆಗೆ ನನಗೆ ತಾವು ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಬಳಿಕ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.
ಇದರೊಂದಿಗೆ ಚನ್ನಪಟ್ಟಣ ಉಪಚುನಾವಣೆ ಕದನ ಮತ್ತಷ್ಟು ರಂಗೇರಿದ್ದು, ಈಗ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲ ಮೂಡಿಸಿದೆ.
Click