ನ್ಯೂಸ್ ನಾಟೌಟ್: ಸೆಂಟ್ರಲ್ ಜೈಲಿನ ಒಳಗೋಡೆ ಬಳಿ ನಿಷೇಧಿತ ತಂಬಾಕು ವಸ್ತುಗಳು ಪತ್ತೆಯಾಗಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನ ಒಳಭಾಗದ ಗೋಡೆಗಳ ಬಳಿ ಚೆಂಡಿನ ಆಕಾರದ ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಉಂಡೆಗಳು ಪತ್ತೆಯಾಗಿದ್ದು, ಈ ಉಂಡೆಗಳಲ್ಲಿ ತಂಬಾಕು, ಗುಟ್ಕಾ, ಬೀಡಿ, ಪಾನ್ ಮಸಾಲಾ ಸೇರಿದಂತೆ ನಿಷೇಧಿತ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ.
ಜೈಲಿನಲ್ಲಿರುವ ಪರಿಚಿತ ಕೈದಿಗಳಿಗೆ ತಲುಪುವಂತೆ ನಿಷೇಧಿತ ವಸ್ತುಗಳನ್ನು ಒಳಗೊಂಡ ಇಂತಹ ಚೆಂಡುಗಳನ್ನು ಕಿಡಿಗೇಡಿಗಳು ಎಸೆದು ಪರಾರಿಯಾಗುವ ರೂಢಿ ಈ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು ಎನ್ನುವುದು ಗೊತ್ತಾಗಿದೆ. ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಚೀಲಗಳಿಂದ ಮಾಡಿರುವ ಚೆಂಡುಗಳು ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ದಿದೆ.
ಈಗಾಗಲೇ ಮೊಬೈಲ್ ಬಳಕೆ, ಹನಿಟ್ರ್ಯಾಪ್ ಹಾಗೂ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ಕೆಲವು ಕೈದಿಗಳು ಬ್ಲ್ಯಾಕ್ಮೇಲ್ ಮಾಡುತ್ತಿರುವ ವಿದ್ಯಮಾನಗಳು ಇಡೀ ರಾಜ್ಯದ ಗಮನ ಸೆಳೆದ ಬೆನ್ನಲ್ಲಿಯೇ, ಕಾರಾಗೃಹ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಹಾಗೂ ಅದೇ ಕಚೇರಿಯ ಎಸ್ಪಿ ಯಶೋಧಾ ಕಲಬುರಗಿ ಜೈಲಿಗೆ ದಿಢೀರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಜೈಲರ್ಗಳಾದ ಶಹನಾಜ್ ನೀಗೆವಾನ್ ಹಾಗೂ ಪರಮಾನಂದ ಎಂಬವರನ್ನು ಅಮಾನತ್ತುಗೊಳಿಸಲಾಗಿದೆ.
Click