ನ್ಯೂಸ್ ನಾಟೌಟ್: ಮದುವೆ ಸಂಭ್ರಮದ ಖುಷಿಯಲ್ಲಿದ್ದ ಮನೆಮಂದಿಯ ನೆಮ್ಮದಿಯನ್ನು ಆ ಒಂದು ಘೋರ ದುರಂತ ಕೆಲವೇ ಗಂಟೆಗಳಲ್ಲಿ ಕಸಿದುಕೊಂಡಿತ್ತು. ಮದುವೆ ದಿಬ್ಬಣಕ್ಕೆ ಹೊರಟಿದ್ದ ಮೂವತ್ತು ಮಂದಿ ವಧುವಿನ ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಘೋರ ದುರಂತ ಸಂಭವಿಸಿ ಮೃಥಪಟ್ಟ ಹೃದಯ ವಿದ್ರಾವಕ ಘಟನೆ ಉತ್ತರಾಖಂಡ್ ನ ಪೌರಿ ಜಿಲ್ಲೆಯಲ್ಲಿ ಶುಕ್ರವಾರ (ಅ.4) ರಾತ್ರಿ ಸಂಭವಿಸಿದೆ.
ಉತ್ತರಾಖಂಡ್ ನ ಹರಿದ್ವಾರದ ಲಾಲ್ಧಾಂಗ್ ನಿಂದ ಪೌರಿಯ ಬಿರೋನ್ ಖಾಲ್ ಗ್ರಾಮಕ್ಕೆ ಶುಕ್ರವಾರ ಮದುವೆ ದಿಬ್ಬಣಕ್ಕೆ ಜನರನ್ನು ಬಸ್ನಲ್ಲಿ ಕರೆದುಕೊಂಡು ಹೋಗಲಾಗುತಿತ್ತು. ರಾತ್ರಿ ಸುಮಾರು ಎಂಟು ಗಂಟೆಯ ಸುಮಾರಿಗೆ ಸಿಮಂಡಿ ಗ್ರಾಮದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಇನ್ನೂರು ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ. ಬಸ್ಸಿನಲ್ಲಿ ಐವತ್ತು ಮಂದಿ ಇದ್ದರು. ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ಘಟನೆಯಲ್ಲಿ ಕನಿಷ್ಠ ಮೂವತ್ತು ಮಂದಿ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.
ತಕ್ಷಣ ಘಟನಾ ಸ್ಥಳಕ್ಕೆ ಸ್ಥಳೀಯರು, ಪೊಲೀಸರು ಮತ್ತು ಎಸ್ಡಿಆರ್ ಎಫ್ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಭೀಕರ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.