ನ್ಯೂಸ್ ನಾಟೌಟ್: ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ-ನರಕದೊಳಗೆ ಸಿಲುಕಿ ಸ್ಪರ್ಧಿಗಳು ತೊಳಲಾಟ ನಡೆಸುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯೊಳಗೆ ಮತ್ತೊಂದು ಘಟನೆ ಇದೀಗ ಭಾರಿ ಸುದ್ದಿಯಲ್ಲಿದೆ.
ಬಿಗ್ಬಾಸ್ ಮನೆಯಲ್ಲಿ ಜಗಳ, ಕೂಗಾಟ, ಬೈದಾಟ, ಒಮ್ಮೊಮ್ಮೆ ಹೊಡೆದಾಟ ಇವೆಲ್ಲವೂ ಸಾಮಾನ್ಯ. ಆದರೆ ಇದೀಗ ಬಿಗ್ಬಾಸ್ ಸೀಸನ್ 11 ರಲ್ಲಿ ಬಿಗ್ಬಾಸ್ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿರುವುದು ಎಲ್ಲರನ್ನೂ ಅಚ್ಚರಿಗೆ ದೂಡಿದೆ. ರಾತ್ರೋ ರಾತ್ರಿ ಬಿಗ್ಬಾಸ್ ಮನೆಯೊಳಕ್ಕೆ ದೊಡ್ಡ ಕ್ರೇನ್ ನುಗ್ಗಿದೆ. ಐದಾರು ಮಂದಿ ದಾಂಡಿಗರು ಬಂದು ಮನೆಯ ಒಂದು ಭಾಗವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಮಾತ್ರವೇ ಅಲ್ಲದೆ ಕ್ರೇನ್ನ ಸಹಾಯದಿಂದ ಗೋಡೆಯೊಂದನ್ನು ಕಿತ್ತು ಎತ್ತಿಕೊಂಡು ಹೋಗಿದ್ದಾರೆ. ಇದನ್ನು ನೋಡಿ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಶಾಕ್ ಆಗಿರುವುದಂತೂ ನಿಜ.
ಇದೀಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಬಿಗ್ಬಾಸ್ ಮನೆಯಲ್ಲಿ ಅಚಾನಕ್ಕಾಗಿ ಜೋರಾಗಿ ಸೈರನ್ ಕೂಗಿಕೊಂಡಿದೆ. ಇದರಿಂದ ಎಲ್ಲರೂ ಭಯಗೊಂಡಿದ್ದಾರೆ. ಕೂಡಲೇ ಮನೆಯ ಹೊರಗೆ ದೊಡ್ಡ ಕ್ರೇನ್ ಒಂದು ಬಂದಿದೆ. ಆ ಕ್ರೇನ್ನಲ್ಲಿ ಕೆಲವು ದಾಂಡಿಗರು ಕೈಯಲ್ಲಿ ಕೆಲ ಆಯುಧಗಳನ್ನು ಹಿಡಿದುಕೊಂಡು ಬಂದಿದ್ದಾರೆ. ಬಂದ ಒಡನೆ ನರಕದ ಜಾಗವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಅಲ್ಲಿದ್ದ ಮಡಕೆ ಒಡೆದಿದ್ದಾರೆ, ಕುರ್ಚಿ ಮುರಿದಿದ್ದಾರೆ. ಜೈಲಿನ ಕಬ್ಬಿಣದ ಗೋಡೆಗಳನ್ನು ಒಡೆದು ಬೀಳಿಸಿದ್ದಾರೆ. ಕೆಲವನ್ನು ಯಂತ್ರಗಳನ್ನು ಬಳಸಿ ಕತ್ತರಿಸಿದ್ದಾರೆ. ಅಂತಿಮವಾಗಿ ದೊಡ್ಡ ಕ್ರೇನ್ನ ಸಹಾಯದಿಂದ ಬಿಗ್ಬಾಸ್ ಮನೆಯ ನರಕದ ಕಬ್ಬಿಣದ ಗೇಟ್ ಅನ್ನು ಕಿತ್ತು ಬಿಸಾಡಿ, ಎತ್ತಿಕೊಂಡು ಹೋಗಿದ್ದಾರೆ. ಅಲ್ಲಿಗೆ ಬಿಗ್ಬಾಸ್ನಲ್ಲಿ ನರಕದ ಕಾನ್ಸೆಪ್ಟ್ ಮುಗಿದಂತೆ ಕಾಣುತ್ತಿದೆ. ಆದರೆ ಹೀಗೆ ಹಠಾತ್ತನೆ ನರಕದ ಸೆಟಪ್ ಅನ್ನು ಕಿತ್ತು ಬಿಸಾಡಿದ್ದಕ್ಕೆ ಕಾರಣವೇನು ಎಂಬುದು ಅನುಮಾನಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದಷ್ಟೆ ಈ ಬಾರಿಯ ಬಿಗ್ಬಾಸ್ನ ಸ್ವರ್ಗ-ನರಕ ಕಾನ್ಸೆಪ್ಟ್ ಬಗ್ಗೆ ಮಹಿಳಾ ಆಯೋಗ, ಮಾನವ ಹಕ್ಕು ಆಯೋಗ ಅಸಮಾಧಾನ ವ್ಯಕ್ತಪಡಿಸಿತ್ತು. ನರಕದಲ್ಲಿರುವವರಿಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ, ಬದಲಿಗೆ ಗಂಜಿ ಕೊಡಲಾಗುತ್ತಿತ್ತು, ಶೌಚ ಬಳಸಲು ಅವಕಾಶ ಇರಲಿಲ್ಲ. ಇದೆಲ್ಲವೂ ಮಾನವ ಹಕ್ಕು ಉಲ್ಲಂಘನೆ, ಮಾನವನಿಗೆ ಕನಿಷ್ಟ ಸಿಗಬೇಕಾದ ಸೌಲಭ್ಯವನ್ನು ನೀಡುತ್ತಿಲ್ಲವೆಂದು ಆರೋಪಿಸಿ ಮಾನವ ಹಕ್ಕು ಆಯೋಗಕ್ಕೆ ಮಹಿಳಾ ಆಯೋಗದ ನಾಗಲಕ್ಷ್ಮಿ ಪತ್ರ ಬರೆದಿದ್ದರು. ಇದರಿಂದಾಗಿ ಮಾನವ ಹಕ್ಕು ಆಯೋಗ ದೂರು ದಾಖಲು ಮಾಡಿಕೊಂಡು ಬಿಗ್ಬಾಸ್ಗೆ ನೊಟೀಸ್ ಕಳಿಸಿತ್ತು, ಅದೇ ಕಾರಣಕ್ಕೆ ಹಠಾತ್ತನೆ ಈ ಬದಲಾವಣೆ ಕಂಡು ಬಂದಿದೆ.