ನ್ಯೂಸ್ ನಾಟೌಟ್: ಕೊಡಗು-ಸಂಪಾಜೆಯ ಫೈರ್ ಬ್ರ್ಯಾಂಡ್ ಯುವ ಬಿಜೆಪಿ ನಾಯಕ ಕಳಗಿ ಬಾಲಚಂದ್ರ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಕುರಿತಂತೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಶಾಂತಿ ಜಿ. ತೀರ್ಪನ್ನು ಅಕ್ಟೋಬರ್ -19ಕ್ಕೆ ಕಾಯ್ದಿರಿಸಿದ್ದಾರೆ.
2019 ಮಾರ್ಚ್ 19 ರಂದು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ಹತ್ಯೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಎ1 ಆರೋಪಿಯಾಗಿದ್ದ ಸಂಪತ್ ಅನ್ನುವಾತ ಹತ್ಯೆಗೊಳಗಾಗಿದ್ದ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಎ2 ಆರೋಪಿ ಹರಿ ಪ್ರಸಾದ್ ಹಾಗೂ ಎ3 ಆರೋಪಿ ಜಯನ್ ಎಂಬುವವರು ಮಡಿಕೇರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಅಕ್ಟೋಬರ್ 16ರಂದು ಈ ಪ್ರಕರಣದ ವಿಚಾರಣೆಯನ್ನು 1ನೇ ಅಪರ ಜಿಲ್ಲಾ ಮತ್ತ ಸತ್ರ ನ್ಯಾಯಾಧೀಶೆ ಪ್ರಶಾಂತಿ ಜಿ. ಕೂಲಂಕುಷವಾಗಿ ವಿಚಾರಣೆ ನಡೆಸಿದರು. ತೀರ್ಪನ್ನು ಅಕ್ಟೋಬರ್ -19ಕ್ಕೆ ಕಾಯ್ದಿರಿಸಿದರು.
ಸೆಕ್ಷನ್ 120B, 302, 201 R/w sec 34 ಐಪಿಸಿ ಪ್ರಕಾರ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಗೆ ಇಬ್ಬರು ಆರೋಪಿಗಳು ಒಳಪಡುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಶಿಕ್ಷೆ ಎದುರಾದರೂ ಆರೋಪಿಗಳು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
2019 ಮಾರ್ಚ್ 19 ರಂದು ಹಿಂದೆ ಕೊಲೆಯಾದ ಕೊಡಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಮುಂದಿನ ಬಾರಿ ಶಾಸಕ ಸ್ಥಾನದ ಅಭ್ಯರ್ಥಿಯಾಗಿದ್ದರು. ಸಂಪಾಜೆ, ಮಡಿಕೇರಿ ಭಾಗದಲ್ಲಿ ಪ್ರಭಾವಿಯಾಗಿ ಬೆಳೆದಿದ್ದ ಬಾಲಚಂದ್ರ ಕಳಗಿ ಅವರನ್ನು ಆವತ್ತು ಜೊತೆಗಿದ್ದವರೇ ಕೊಲೆ ಮಾಡಿದ್ದು ತನಿಖೆಯಿಂದ ಹೊರಬಂದು ಭಾರಿ ಚರ್ಚೆಗೆ ಕಾರಣವಾಗಿತ್ತು.
2019ರ ಮಾರ್ಚ್ 19ರಂದು ಬೆಳಗ್ಗೆ ಬಾಲಚಂದ್ರ ಕಳಗಿ, ಸ್ನೇಹಿತ ಸಂಪತ್ ಕುಮಾರ್ ಕಾರಿನಲ್ಲೇ ಸಂಪಾಜೆಯಿಂದ ಮಡಿಕೇರಿಗೆ ತೆರಳಿದ್ದರು. ಮಡಿಕೇರಿಗೆ ಹೋಗುವ ಸಂದರ್ಭದಲ್ಲಿ ಮೇಕೇರಿ ಬಳಿ ಬಾಲಚಂದ್ರ ಅವರು ತಮ್ಮ ಓಮ್ನಿ ಕಾರನ್ನು ನಿಲ್ಲಿಸಿದ್ದರು. ಅಲ್ಲಿ ಕಾರು ನಿಲ್ಲಿಸಿ ಸಂಪತ್ ಕಾರಿನಲ್ಲಿ ಮಡಿಕೇರಿ ತೆರಳಿದ್ದರು. ಕಾರ್ಯ ನಿಮಿತ್ತ ತೆರಳಿದ್ದ ಬಾಲಚಂದ್ರ ಕಳಗಿ, ಸಂಜೆ ಹೊತ್ತಿಗೆ ಸಂಪತ್ ಕಾರಿನಲ್ಲಿಯೇ ಹಿಂತಿರುಗಿದ್ದರು. ಅರ್ಧ ದಾರಿಯಲ್ಲಿ ಕಾರಿನಿಂದ ಇಳಿದು ತನ್ನ ಒಮ್ನಿಯಲ್ಲಿ ಬಾಲಚಂದ್ರ ಬರುತ್ತಿದ್ದರು. ಆದರೆ, ಅದಾಗಲೇ ಸಂಪತ್ ಸ್ನೇಹಿತ ಜಯನ್ ಲಾರಿ ಹಿಡಿದು ಕಾದು ಕುಳಿತಿದ್ದ. ಅತ್ತ ಸಂಪತ್ ಕುಮಾರ್ ನೀಡಿದ ಸುಳಿವು ಆಧರಿಸಿ ಲಾರಿಯ ಅಕ್ಸಿಲೇಟರ್ ಅದುಮಿದ್ದ ಜಯನ್ , ಶರವೇಗದಲ್ಲಿ ಬರತೊಡಗಿದ್ದ. ಮೇಕೇರಿ ತಿರುವಿನಲ್ಲಿ ಓಮ್ನಿಯಲ್ಲಿ ನಿಧಾನಕ್ಕೆ ಬರುತ್ತಿದ್ದ ಬಾಲಚಂದ್ರ ಕಳಗಿ ಕಾರಿಗೆ ಅಪ್ಪಳಿಸಿದ್ದಾನೆ. ಸಂಪತ್ ಪ್ಲಾನ್ ಸಕ್ಸಸ್ ಆಗಿತ್ತು. ಆಕ್ಸಿಡೆಂಟ್ ಆಗಿ ಬಾಲಚಂದ್ರ ಕಳಗಿ ಸಾವನ್ನಪ್ಪಿದ್ದಾಗಿ ಸಹಜ ಸುದ್ದಿಯಾಗಿತ್ತು. ಆದರೆ, ಬಾಲಚಂದ್ರ ಕಳಗಿಯ ಇತರೇ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅಪಘಾತದ ಬಗ್ಗೆ ಸಂಶಯ ಮೂಡಿತ್ತು. ಬಾಲಚಂದ್ರ ಅವರ ಮಾವ ರಾಜಾರಾಮ ಕಳಗಿ ಮಡಿಕೇರಿ ಠಾಣೆಯಲ್ಲಿ ಸಂಶಯದ ಮೇರೆಗೆ ದೂರು ದಾಖಲಿಸಿದ್ದರು.
ಬಾಲಚಂದ್ರ ಅನಿರೀಕ್ಷಿತ ಸಾವು ಬಿಜೆಪಿ ನಾಯಕರಿಗೂ ಆಘಾತ ಮೂಡಿಸಿತ್ತು. ಸಹಜವಾಗೇ ಕುತೂಹಲಕ್ಕೀಡಾಗಿದ್ದ ಪ್ರಕರಣದ ತನಿಖೆಗೆ ಅಂದಿನ ಕೊಡಗು ಎಸ್ಪಿ ಡಾ.ಸುಮನ್ ಡಿ ಪೆನ್ನೇಕರ್ ಮುತುವರ್ಜಿ ವಹಿಸಿದ್ದರು. ಡಿವೈಎಸ್ಪಿ ಸುಂದರರಾಜ್ ಮತ್ತು ಗ್ರಾಮಾಂತರ ಸರ್ಕಲ್ ಸಿದ್ದಯ್ಯ ನೇತೃತ್ವದಲ್ಲಿ ತನಿಖೆಗೆ ತಂಡ ರಚನೆಯಾಗಿತ್ತು. ಸಂಶಯದ ಮೇರೆಗೆ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಲಾರಿ ಚಾಲಕ ಜಗನ್, ಕೇವಲ ಒಂದೂವರೆ ಲಕ್ಷ ರೂಪಾಯಿ ಪಡೆದು ಅಪಘಾತಕ್ಕೆ ಒಪ್ಪಿಕೊಂಡಿದ್ದ. ತಿರುವಿನಲ್ಲಿ ಆಕ್ಸಿಡೆಂಟ್ ಮಾಡಿದ್ರೆ ಏನೂ ಗೊತ್ತಾಗಲ್ಲ ಎಂದು ಸಂಪತ್ ಕುಮಾರ್ ಹಾಕಿದ್ದ ಸ್ಕೆಚ್ ಆತನಿಗೇ ಮುಳುವಾಗಿತ್ತು. ನಾಲ್ಕೇ ದಿನದಲ್ಲಿ ಪೊಲೀಸರು ಸಂಪತ್ ಕುಮಾರ್ ಮತ್ತು ಆತನಿಗೆ ಹಣದ ನೆರವು ನೀಡಿದ್ದ ಹರಿಪ್ರಸಾದ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಪ್ರಕರಣದ ಬೆನ್ನತ್ತಿ ಹಿಡಿದ ಡಿವೈಎಸ್ಪಿ ಮತ್ತು ತಂಡಕ್ಕೆ ಎಸ್ಪಿ ಸುಮನ್ ಡಿ ಪೆನ್ನೇಕರ್ ಅಂದು ಬಹುಮಾನವನ್ನೂ ಘೋಷಣೆ ಮಾಡಿದ್ದರು.