ಆಯುಧ ಪೂಜೆಗೆ ಹೆಚ್ಚು ಖರ್ಚು ಮಾಡದಂತೆ KSRTC ನೌಕರರಿಗೆ ಆದೇಶ..!ಒಂದು ಬಸ್ಸಿಗೆ 100 ರೂ. ಒಳಗೆ ಪೂಜೆ ಮುಗಿಸುವಂತೆ ಸೂಚನೆ..!

ನ್ಯೂಸ್ ನಾಟೌಟ್: ಈ ಬಾರಿ ಆಯುಧ ಪೂಜೆಗೂ ದುಡ್ಡಿಲ್ಲದೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ದಿವಾಳಿಯಾಗಿವೆ ಎಂಬ ಮಾತು ಕೇಳಿ ಬರುತ್ತಿದೆ. ಶಕ್ತಿಯೋಜನೆಗೆ ಉಪಯೋಗವಾಗುತ್ತಿರೋ ಬಸ್‌ಗಳಿಗೆ ಆಯುಧ ಪೂಜೆಗೆ ತಲಾ 100 ರೂ. ಖರ್ಚು ಮಾಡುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ. ಆಯುಧ ಪೂಜೆ ಸ್ವಚ್ಛತೆ, ಅಲಂಕಾರಕ್ಕೆ ಕೆಎಸ್‌ಆರ್‌ಟಿಸಿ ಕೇವಲ ಪುಡಿಗಾಸು ಬಿಡುಗಡೆ ಮಾಡಿದೆ ಎಂದು ದೂರಲಾಗಿದೆ. ಸಾರಿಗೆ ನಿಗಮ 1 ಬಸ್‌ಗೆ ತಲಾ 100 ರೂ. ಖರ್ಚು ಮಾಡುವಂತೆ ಸೂಚನೆ ನೀಡಿದೆ. ಪ್ರತಿಯೊಂದು ಬಸ್ಸಿನ ಸ್ವಚ್ಛತೆ ಅಲಂಕಾರ ಮತ್ತು ನಿರ್ವಹಣೆಗೆ ಕಡಿಮೆ ಹಣ ಬಿಡುಗಡೆ ಮಾಡಿರುವುದಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್‌ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿ ಆಸೆಗೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ನಿರಾಸೆ ಮಾಡಿದೆ. ಬಿಡುಗಡೆ ಮಾಡಿರುವ 100 ರೂ. ನಲ್ಲಿ ಒಂದು ಬಸ್‌ಗೆ ಪೂಜೆ ಮಾಡೋಕೆ ಆಗುತ್ತಾ? ಒಂದು ಮಾರು ಸೇವಂತಿಗೆ ಹೂವಿಗೆ 70 ರೂ. ಇರುವಾಗ ಹಬ್ಬದ ದಿನ 100 ರೂ. ನಲ್ಲಿ ಬಸ್‌ಗೆ ಹೇಗೆ ಪೂಜೆ ಮಾಡೋದು? ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರುವಂತೆ ಅರ್ಥಪೂರ್ಣ ವಾಗಿ ಆಯುಧ ಪೂಜೆಯನ್ನು ಮಾಡಲು ಕೆಎಸ್‌ಆರ್‌ಟಿಸಿ ಆದೇಶ ನೀಡಿದೆ.