ನ್ಯೂಸ್ ನಾಟೌಟ್: ಹುಟ್ಟುವಾಗ ನಾವು ಹೇಗೆ ಹುಟ್ಟುತ್ತೇವೆ ಅನ್ನೋದು ಮುಖ್ಯವಲ್ಲ, ಹೇಗೆ ಬದುಕಿದ್ದೇವೆ ಎಷ್ಟು ಜನಕ್ಕೆ ನಾವು ಉಪಕಾರ ಆಗಿದ್ದೇವೆ ಅನ್ನೋದೇ ಜೀವನದ ಬಹು ದೊಡ್ಡ ಸಾಧನೆ, ಅಂತಹ ಸಾಧನೆಯನ್ನು ದೊಡ್ಡ ಹುದ್ದೆಗಳಲ್ಲಿ ಇರುವವರೇ ಮಾಡಬೇಕೆಂದೇನು ಇಲ್ಲ. ಶ್ರಮ ಇದ್ದರೆ ಸಾಮಾನ್ಯ ಹಳ್ಳಿಯ ಶಿಕ್ಷಕರೊಬ್ಬರು ಕೂಡ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಅನ್ನುವುದು ನಿರೂಪಿತಗೊಂಡಿದೆ.
ಹೆಸರು ಸರಸ್ವತಿ, ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರು ತಮ್ಮ ಸೇವಾ ನಿವೃತ್ತಿಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಊರಿನವರು ಸೇರಿಕೊಂಡು ಅವರಿಗೆ ಸ್ಮರಣೀಯ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರಸ್ವತಿ ಅವರಿಗೆ ಪಾಠ ಮಾಡಿದ ಗುರುಗಳು ಕಮಾಲಾಕ್ಷಿ ಕೂಡ ಪಾಲ್ಗೊಂಡಿದ್ದರು ಅನ್ನುವುದು ವಿಶೇಷ. ಶೌರ್ಯ ವಿಪತ್ತು ನಿರ್ವಹಣಾ ಘಟಕ, ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸರಸ್ವತಿ ಟೀಚರ್ ಗೆ ನೆನೆಪಿನ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ಈ ವಿಶೇಷ ಕಾರ್ಯಕ್ರಮಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಅಧ್ಯಕ್ಷ ಚಂದ್ರಶೇಖರ್ ಪೇರಾಲು, ಸುಳ್ಯ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಮಾಲಿನಿ ವಿನೋದ್ ,ಪುಷ್ಪಾಧರ ಕೊಡಕೆರಿ, ಶ್ವೇತಾ ಅರಮನೆ ಗಾಯ,ಮಮತಾ, ಧನಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.