ನ್ಯೂಸ್ ನಾಟೌಟ್: ಬ್ರಿಟನ್ ಕಳ್ಳನೊಬ್ಬ ಒಂಟಿ ಮಹಿಳೆ ಇದ್ದ ಮನೆಗೆ ನುಗಿದ್ದಾನೆ. ಮನೆಯೊಳಗೆ ಬಂದ ನಂತರ ಪಾತ್ರೆ ಮತ್ತು ಬಟ್ಟೆಯನ್ನು ತೊಳೆದಿದ್ದಾನೆ. ನಂತರ ಮನೆಯಲ್ಲಿನ ಎಲ್ಲಾ ಕೆಲಸಗಳನ್ನು ಮಾಡಿ, ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾನೆ. ಚಿಂತೆ ಮಾಡಬೇಡಿ, ಖುಷಿಯಾಗಿ ಹೊಟ್ಟೆ ತುಂಬಾ ಊಟ ಮಾಡಿ ಆರಾಮಾಗಿರಿ ಎಂದ ಪತ್ರದಲ್ಲಿ ಬರೆಯಲಾಗಿತ್ತು ಎನ್ನಲಾಗಿದೆ.
ಕಾರ್ಡಿಫ್ ನ್ಯಾಯಾಲಯ ಕಳ್ಳನಿಗೆ 22 ತಿಂಗಳ ಜೈಲು ಶಿಕ್ಷೆ ನೀಡಿ ಆದೇಶಿಸಿದೆ. ಮಹಿಳೆಗೆ ಮಾನಸಿಕ ಹಿಂಸೆ ಮತ್ತು ಅಭದ್ರತೆ ಸೃಷ್ಟಿಸಿದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ ಎನ್ನಲಾಗಿದೆ. 36 ವರ್ಷದ ಕಳ್ಳ ಡೇಮಿಯನ್ ವೊಜನಿಲೊವಿಚ್ ಜುಲೈ 16ರಂದು ಮಾನ್ಮೌತ್ಶೈರ್ ನಗರದಲ್ಲಿ ವಿಚಿತ್ರವಾಗಿ ಕಳ್ಳತನ ಮಾಡಿದ್ದನು. ಇದರಿಂದ ಮನೆಯಲ್ಲಿರಲು ಮಹಿಳೆ ಹೆದರಿಕೊಂಡಿದ್ದರು. ಮಹಿಳೆ ಹೇಳಿಕೆ ಪ್ರಕಾರ, ಕಳ್ಳತನ ನಡೆದ ಎರಡು ವಾರದ ಬಳಿಕ ಕಳ್ಳನನ್ನ ಹಿಡಿಯಲಾಯ್ತು. ಕಳ್ಳ ಸಿಗೋವರೆಗೂ ನನ್ನಲ್ಲಿ ಒಂದು ರೀತಿಯ ವಿಚಿತ್ರ ಭಯ ಉಂಟಾಗಿತ್ತು. ಈ ರೀತಿಯ ಅನುಭವ ಇದೇ ಮೊದಲ ಬಾರಿ ಆಗಿತ್ತು ಎಂದು ಹೇಳಿದ್ದಾರೆ.
ಈ ಕಳ್ಳ ನನಗೆ ಗೊತ್ತಿರುವವನೇ? ಕಳ್ಳತನಕ್ಕೆ ಬಂದವನು ಮನೆಗೆಲಸಗಳನ್ನು ಮಾಡಿದ್ದೇಕೆ? ಆತ ನನ್ನನ್ನು ಹಿಂಬಾಲಿಸುತ್ತಿದ್ದಾನೆಯೇ? ನಾನು ಮನೆಯಲ್ಲಿ ಒಂಟಿಯಾಗಿರೋದು ಆತನಿಗೆ ಗೊತ್ತಾಗಿದೆಯಾ? ಮತ್ತೆ ಮನೆಗೆ ಬರುತ್ತಾನಾ ಎಂಬ ಪ್ರಶ್ನೆಗಳು ನನ್ನನ್ನು ಸುತ್ತುವರಿದಿದ್ದವು. ಮನೆಯಲ್ಲಿ ಒಂಟಿಯಾಗಿರಲು ಸಾಕಷ್ಟು ಭಯವಾಗಿತ್ತು. ನನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರೆ ಹೇಗೆ ಎಂಬ ಭಯ ಪ್ರತಿ ಕ್ಷಣವೂ ನನ್ನನ್ನು ಕಾಡಿತ್ತು ಎಂದು ಮಹಿಳೆ ಹೇಳಿದ್ದಾರೆ.
ಮಹಿಳೆ ಇಲ್ಲದ ವೇಳೆ ಮನೆಯೊಳಗೆ ಬಂದ ಕಳ್ಳ ಡೇಮಿಯನ್ ವೊಜನಿಲೊವಿಚ್, ಮನೆಗೆಲಸ ಮಾಡಿದ್ದಾನೆ. ಬಂದಿದ್ದ ಆರ್ಡರ್ ತೆಗೆದುಕೊಂಡು ಅನ್ಬಾಕ್ಸ್ ಮಾಡಿ ಶೂಗಳನ್ನು ಅವುಗಳ ಸ್ಥಾನದಲ್ಲಿರಿಸಿ, ಪ್ಯಾಕಿಂಗ್ ಕವರ್ ಡಸ್ಟ್ಬಿನ್ಗೆ ಹಾಕಿದ್ದಾನೆ. ಅಡುಗೆಮನೆಯಲ್ಲಿದ್ದ ಎಲ್ಲಾ ಪಾತ್ರೆಗಳನ್ನು ತೊಳೆದು ಕ್ರಮಬದ್ಧವಾಗಿ ಜೋಡಿಸಿದ್ದಾನೆ. ನಂತರ ಕೊಳೆಯಾಗಿದ್ದ ಬಟ್ಟೆಗಳನ್ನು ತೊಳೆದಿದ್ದಾನೆ. ಶಾಪಿಂಗ್ ಬ್ಯಾಗ್ನಲ್ಲಿದ್ದ ಎಲ್ಲಾ ಆಹಾರ ಸಾಮಾಗ್ರಿಗಳನ್ನು ಫ್ರಿಡ್ಜ್ನಲ್ಲಿ ಸರಿಯಾಗಿರಿಸಿದ್ದಾನೆ. ನಂತರ ಪಕ್ಷಿಗಳಿಗೆ ಕಾಳುಗಳನ್ನು ಹಾಕಿ, ಮನೆಯಲ್ಲಿದ್ದ ಪ್ಲಾಂಟ್ ಕುಂಡದಲ್ಲಿನ ಮಣ್ಣು ಸಡಿಲಗೊಳಿಸಿ ನೀರು ಹಾಕಿ ಪೋಷಿಸಿದ್ದಾನೆ. ಕೊನೆಗೆ ಮನೆಯ ನೆಲವನ್ನು ಸ್ವಚ್ಛವಾಗಿ ತೊಳೆದಿದ್ದಾನೆ ಎಂದು ಮಹಿಳೆಯೇ ತಿಳಿಸಿದ್ದಾಳೆ.
ಮನೆಯಿಂದ ಹೊರಡುವ ಮುನ್ನ ಅಡುಗೆ ತಯಾರಿಸಿದ್ದಾನೆ. ಮಹಿಳೆ ಮನೆಗೆ ಬಂದಾಗ ಡೈನಿಂಗ್ ಟೇಬಲ್ ಮೇಲೆ ಆಹಾರದ ಗ್ಲಾಸ್ನಲ್ಲಿ ರೆಡ್ ವೈನ್ ಹಾಕಿ, ಪಕ್ಕದಲ್ಲಿಯೇ ಬಾಟೆಲ್ ಇರಿಸಲಾಗಿತ್ತು. ಲಿವಿಂಗ್ ರೂಮ್ ಮೇಜಿನ ಮೇಲೆ ಸಿಹಿ ತಿಂಡಿಯನ್ನು ಇರಿಸಲಾಗಿತ್ತು. ಇದೆಲ್ಲವನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ. ಪಕ್ಕದ್ಮನೆಯವರು ಯಾರೋ ಬಟ್ಟೆ ತೊಳೆಯುತ್ತಿರೋದು ತಮ್ಮ ಗಮನಕ್ಕೆ ಬಂದಿರೋದರ ಬಗ್ಗೆ ಮಹಿಳೆಗೆ ತಿಳಿಸಿದ್ದಾರೆ. ಕಳ್ಳ ಬರೆದಿಟ್ಟ ಚೀಟಿ ನೋಡಿದ ಮಹಿಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆ ನಡೆದ ಬಳಿಕ ಕಳ್ಳನನ್ನು ಬಂಧಿಸಲಾಗಿದೆ. ಆದ್ರೆ ಯಾಕೆ ಹೀಗೆಲ್ಲಾ ಮಾಡಿದ ಎಂಬುದರ ಬಗ್ಗೆ ಕಾರಣ ನಿಗೂಢವಾಗಿದೆ.