ಕಾಂಗ್ರೆಸ್ ಸೇರಲಿದ್ದಾರ ಕುಸ್ತಿಪಟು ವಿನೇಶ್ ಫೋಗಟ್‌..? ರಾಹುಲ್ ಗಾಂಧಿ ಭೇಟಿ ಬಳಿಕ ಕುತೂಹಲ ಕೆರಳಿಸಿದ ರಾಜಕೀಯ ಕುಸ್ತಿ..!

ನ್ಯೂಸ್ ನಾಟೌಟ್: ಹರಿಯಾಣ ವಿಧಾನಸಭೆ ಚುನಾವಣೆಗೆ ತಯಾರಿ ನಡೆಯುತ್ತಿರುವ ಹೊತ್ತಲ್ಲೇ ಖ್ಯಾತ ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌ ಮತ್ತು ಬಜರಂಗ್‌ ಪುನಿಯಾ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi)ಯನ್ನು ಭೇಟಿಯಾಗಿದ್ದಾರೆ. ಈ ಬೆನ್ನಲ್ಲೇ ವಿನೇಶ್‌ ಫೋಗಟ್‌ ಚುನಾವಣೆಗೆ ಸ್ಫರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿಯನ್ನು ಭೇಟಿಯಾದ ಬೆನ್ನಲ್ಲೇ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರನ್ನೂ ಭೇಟಿಯಾಗಿದ್ದು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ. ಆದರೆ ಪುನಿಯಾ ಮತ್ತು ಫೋಗಟ್ ಅವರನ್ನು ಚುನಾವಣಾ ಕಣದಲ್ಲಿ ಕಣಕ್ಕಿಳಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಕಾಂಗ್ರೆಸ್ ಸ್ಪಷ್ಟತೆ ನೀಡಿಲ್ಲ. ವಿನೇಶ್‌ ಫೋಗಟ್ (Vinesh Phogat) ಜನನಾಯಕ್ ಜನತಾ ಪಕ್ಷದ ಅಮರ್‌ಜೀತ್ ಧಂಡಾ ವಿರುದ್ಧ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಬಜರಂಗ್‌ ಪುನಿಯಾ (Bajrang Punia) ಸ್ಪರ್ಧೆ ಮಾಡಲಿರುವ ಕ್ಷೇತ್ರದ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಕುಸ್ತಿಪಟುಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.