ನ್ಯೂಸ್ ನಾಟೌಟ್: ಸಾಮಾನ್ಯವಾಗಿ ವಿದ್ಯಾರ್ಥಿಗಳ ಒಳಿತಿಗಾಗಿ ಶಿಕ್ಷಕರು ಒಂದೆರಡು ಪೆಟ್ಟು ಕೊಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಶಿಕ್ಷಕರು ಬರೋಬ್ಬರಿ ಮೂರು ದಿನಗಳಿಂದ ಬಾಲಕನಿಗೆ ಬೆತ್ತದಿಂದ ಥಳಿಸಿದ್ದಾರೆ ಎನ್ನುವ ದೂರು ದಾಖಲಾಗಿದೆ.
ಸರ್ಕಾರಿ ಪ್ರೌಢಶಾಲೆಯೊಂದರ ವಿದ್ಯಾರ್ಥಿ ತಪ್ಪು ಮಾಡಿದ್ದಾನೆ ಎಂದು ಶಿಕ್ಷಕರೊಬ್ಬರು 3 ದಿನ ಬೆತ್ತದಿಂದ ಹೊಡೆದಿದ್ದು, ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆಗೆ ಒಳಗಾದ ವಿದ್ಯಾರ್ಥಿ ಬೆಳ್ತಂಗಡಿ ತಾಲ್ಲೂಕು ಉರುವಾಲು ನಿವಾಸಿಯಾಗಿದ್ದಾನೆ. ಹಲ್ಲೆ ನಡೆಸಿದ ಆರೋಪದ ಮೇಲೆ ಇಂಗ್ಲಿಷ್ ಶಿಕ್ಷಕ ಅನಂತ ಕುಮಾರ್ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಶಿಕ್ಷಕ ವಿದ್ಯಾರ್ಥಿಗೆ ಸೆ.9, 10, 11ರಂದು ಬೆತ್ತದಿಂದ ಹೊಡೆದ್ದರು. ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ತಿಳಿಸಿರಲಿಲ್ಲ. ನೋವು ಜಾಸ್ತಿಯಾದಾಗ ಮನೆಯವರು ವಿಚಾರಿಸಿದ್ದಾರೆ, ಈ ವೇಳೆ ನಡೆದ ಘಟನೆಯನ್ನು ತಿಳಿಸಿದ್ದಾನೆ. ಬಳಿಕ ಮನೆಯವರು ವಿದ್ಯಾರ್ಥಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಶಿಕ್ಷಕ ಅನಂತ ಕುಮಾರ್ ವಿರುದ್ಧ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.