ನ್ಯೂಸ್ ನಾಟೌಟ್: ಕಳ್ಳನೊಬ್ಬ ಮಧ್ಯ ಪ್ರದೇಶ ರಾಜ್ಯದ ಭೋಪಾಲ್ ವಸ್ತು ಸಂಗ್ರಹಾಲಯದಲ್ಲಿ 15 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳತನ ಮಾಡಿದ್ದಾನೆ. ಅಚ್ಚರಿಯ ಸಂಗತಿ ಎಂದರೆ ಚಿನ್ನ ಕಳ್ಳತನ ಮಾಡಿದ ವಸ್ತು ಸಂಗ್ರಹಾಲಯದಲ್ಲೇ ಕಳ್ಳ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದು, ಪತ್ತೆಯಾದ ಘಟನೆ ನಡೆದಿದೆ.
ಆತ ಕಳ್ಳತನ ಮಾಡಿದ್ದ ಪುರಾತನ ಕಾಲದ ಚಿನ್ನದ ನಾಣ್ಯಗಳು ಹಾಗೂ ಆಭರಣಗಳು ಆತನ ಸುತ್ತಲೂ ಹರಡಿ ಬಿದ್ದಿದ್ದವು, ಆತ ಪ್ರಜ್ಞಾಹೀನನಾಗಿದ್ದ. ಕಳ್ಳ ವಿನೋದ್ ಯಾದವ್ ಕಳೆದ ಭಾನುವಾರ ಸೆಪ್ಟೆಂಬರ್ 1 ರಂದು ಸಂಜೆಯೇ ಮಧ್ಯಪ್ರದೇಶ ರಾಜ್ಯ ಸರ್ಕಾರದ ಒಡೆತನದ ಭೋಪಾಲ್ ವಸ್ತು ಸಂಗ್ರಹಾಲಯಕ್ಕೆ ಟಿಕೆಟ್ ಪಡೆದು ಆಗಮಿಸಿದ್ದ. ಆದರೆ, ರಾತ್ರಿ ವಸ್ತು ಸಂಗ್ರಹಾಲಯ ಮುಚ್ಚುವಾಗ ಕಳ್ಳ ಒಳಗೇ ಅಡಗಿ ಕುಳಿತಿದ್ದ ಎನ್ನಲಾಗಿದೆ.
ಭಾನುವಾರ ರಾತ್ರಿ ವಸ್ತು ಸಂಗ್ರಹಾಲಯದಲ್ಲೇ ಉಳಿದಿದ್ದ ಕಳ್ಳ ವಿನೋದ್ ಯಾದವ್ಗೆ ಮಂಗಳವಾರ ಬೆಳಗ್ಗೆವರೆಗೂ ಸಮಯವಿತ್ತು. ಹೀಗಾಗಿ, ಮೊದಲಿಗೆ ಮ್ಯೂಸಿಯಂನ ಎರಡು ಗ್ಯಾಲರಿ ರೂಂಗಳ ಬೀಗ ಮುರಿದ ಕಳ್ಳ ಅದರಲ್ಲಿ ಇದ್ದ ಅತ್ಯಮೂಲ್ಯ ವಸ್ತುಗಳನ್ನ ತನ್ನ ಚೀಲಕ್ಕೆ ತುಂಬಿಕೊಂಡಿದ್ದ.
ಮಂಗಳವಾರ ಬೆಳಗ್ಗೆ 10.30ಕ್ಕೆ ಮ್ಯೂಸಿಯಂನ ಬಾಗಿಲು ತೆಗೆದ ಸಿಬ್ಬಂದಿ, ಹಲವು ಗ್ಯಾಲರಿಗಳ ಗಾಜು ಮುರಿದಿರೋದನ್ನು ಗಮನಿಸಿದರು. ಅಷ್ಟೇ ಅಲ್ಲ, ಹಲವು ಬೆಲೆಬಾಳುವ ವಸ್ತುಗಳೂ ನಾಪತ್ತೆಯಾಗಿದ್ದವು. ಕೂಡಲೇ ಭದ್ರತಾ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ ಮ್ಯೂಸಿಯಂ ಸಿಬ್ಬಂದಿ ಹುಡುಕಾಟ ಆರಂಭಿಸಿದರು. ಈ ವೇಳೆ ವಸ್ತು ಸಂಗ್ರಹಾಲಯದ ಹಾಲ್ನಲ್ಲೇ ವಿನೋದ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಆತನ ಪಕ್ಕದಲ್ಲೇ ದೊಡ್ಡದೊಂದು ಚೀಲ ಇತ್ತು. ಚೀಲದ ತುಂಬಾ ಬೆಲೆಬಾಳುವ ಪುರಾತನ ಕಾಲದ ಚಿನ್ನಾಭರಣ ಹಾಗೂ ನಾಣ್ಯಗಳು ಬಿದ್ದಿದ್ದದ್ದು ಕಂಡು ಸಿಬ್ಬಂದಿ ಆಶ್ಚರ್ಯ ಪಟ್ಟಿದ್ದಾರೆ.
ಕೆಜಿಗಟ್ಟಲೆ ಬಂಗಾರ ಕಳ್ಳತನ ಮಾಡಿದ್ದ ಕಳ್ಳ, ಭಾರವಾದ ಬ್ಯಾಗ್ ಸಮೇತ ವಸ್ತು ಸಂಗ್ರಹಾಲಯದಿಂದ ಹೊರಗೆ ಬರಲು ಯತ್ನಿಸಿದ್ದ. ಈ ವೇಳೆ ಸುಮಾರು 23 ಅಡಿ ಎತ್ತರದಿಂದ ಹಾರಿದ್ದ. ಹೀಗಾಗಿ, ಆತನ ಕಾಲಿಗೆ ಬಲವಾದ ಗಾಯವಾಗಿತ್ತು. ಗಾಯದ ನೋವಿನಿಂದಾಗಿ ಕಳ್ಳ ಅಲ್ಲಿಯೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದ ಎನ್ನಲಾಗಿದೆ. ಕಳ್ಳನನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click