ನ್ಯೂಸ್ ನಾಟೌಟ್: ಐಟಿ ಕ್ಷೇತ್ರದ ಉದ್ಯೋಗದಲ್ಲಿ ಉತ್ತಮ ಸಂಪಾದನೆಯಿದ್ದರೂ ಆ ಕೆಲಸದಲ್ಲಿ ಒತ್ತಡ ಹೆಚ್ಚು. ಈ ಎಲ್ಲಾ ಪರಿಸ್ಥಿತಿಯಿಂದ ಹೊರಬಂದು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆರೋಗ್ಯದ ಜೊತೆಗೆ ಗರಿಷ್ಠ ಸಂಪಾದನೆ ಮಾಡಬಹುದು ಎಂದು ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯ ಪುತ್ತೂರಿನ ನಿಡ್ಪಳ್ಳಿಯ ಕೃಷಿಕ ಹರಿಕೃಷ್ಣ ಕಾಮತ್ ಅಭಿಪ್ರಾಯಪಟ್ಟರು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳವಾರ (ಸೆ.3ರಂದು) ನೇಚರ್ ಕ್ಲಬ್ ಇದರ 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಸುಸ್ಥಿರ ಸಾವಯವ ಕೃಷಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಸಾಂಪ್ರದಾಯಿಕ ಶೈಲಿಯಲ್ಲಿ ಹಿಂಗಾರ ಅರಳಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹರಿಕೃಷ್ಣ ಕಾಮತ್, ತನ್ನ ಕೃಷಿ ಬದುಕಿನ ಖುಷಿಯನ್ನು ಹಂಚಿಕೊಂಡರು. ತನ್ನ ಮಕ್ಕಳನ್ನು ಕೂಡ ಇತರರ ಕೈಕೆಳಗೆ ದುಡಿಯದಂತೆ ಮಾಡಲು ಅಗತ್ಯ ವಿದ್ಯಾಭ್ಯಾಸ ನೀಡಿ ಕೃಷಿಯಲ್ಲಿ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡಿರುವುದನ್ನು ವಿವರಿಸಿದರು.
ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ ರೈ ಮಾತನಾಡಿ, ಇಂದು ನಾವು ದುಡ್ಡು ಕೊಟ್ಟು ಆಹಾರದ ಜೊತೆ ವಿಷ ಸೇವಿಸುತ್ತಿರುವ ಪರಿಸ್ಥಿತಿಯಿದೆ. ಉತ್ತಮ ಆರೋಗ್ಯಕ್ಕಾಗಿ ಸಾವಯವ ಪದ್ಧತಿಯಲ್ಲಿ ನಮ್ಮ ಆಹಾರವನ್ನು ನಾವೇ ಬೆಳೆಸಿಕೊಳ್ಳಲು ಪ್ರಯತ್ನಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ಮಾತನಾಡಿ, ನೇಚರ್ ಕ್ಲಬ್ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ಕಾರ್ಯಕ್ರಮದ ತಯಾರಿ ಶ್ಲಾಘನೀಯ ಎಂದರು.
ನೇಚರ್ ಕ್ಲಬ್ ಸದಸ್ಯೆ ಮನಸ್ವಿನಿ ಪ್ರಾರ್ಥಿಸಿ, ಅಂತಿಮ ಜೀವ ವಿಜ್ಞಾನ ಪದವಿಯ ತನುಷ್ ಸ್ವಾಗತಿಸಿದರು. ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ, ಕ್ಲಬ್ ನ ಕಾರ್ಯದರ್ಶಿ ಶಿಲ್ಪಾ ವಾರ್ಷಿಕ ವರದಿಯನ್ನು, ಕೋಶಾಧಿಕಾರಿ ಶಶಾಂಕ್ ಮುಂದಿನ ಕಾರ್ಯ ಯೋಜನೆಗಳ ಪಟ್ಟಿ ವಾಚಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ಕಾರ್ತಿಕ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ, ನೇಚರ್ ಕ್ಲಬ್ ಜೊತೆ ಕಾರ್ಯದರ್ಶಿ ಚೈತ್ರಾ ವಂದಿಸಿದರು. ದ್ವಿತೀಯ ಬಿಎಸ್ಸಿಯ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಜೀವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.
ಕಾರ್ಯಕ್ರಮದ ಯಶಸ್ಸಿಗೆ ಜೀವ ವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಅಕ್ಷತಾ, ಕೃತಿಕಾ, ಹರ್ಷಕಿರಣ, ಪಲ್ಲವಿ ಮತ್ತು ಅಜಿತ್ ಕುಮಾರ್ ಹಾಗೂ ಸಿಬ್ಬಂದಿ ಜಯಂತಿ, ಭವ್ಯ, ಗೀತಾ, ಶಿವಾನಂದ ಮತ್ತು ಪವನ್ ಹಾಗೂ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.