ನ್ಯೂಸ್ ನಾಟೌಟ್ : ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಸುಳ್ಯ ಈ ಬಾರಿ ನೀಡಿದ “ನೇಷನ್ ಬಿಲ್ಡರ್ ಅವಾರ್ಡ್” ಗೆ ಭಾಜನರಾಗಿದ್ದ ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಹಾಗೂ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಕು.ಬೇಬಿ ವಿದ್ಯಾ ಪಿ.ಬಿ. ಅವರಿಗೆ “ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ” ಲಭಿಸಿದೆ.
ದ.ಕ. ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ )ಮಂಗಳೂರು, ವಿವಿಧ ವಿಷಯವಾರು ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಆಳ್ವಾಸ್ ಪ.ಪೂ. ಕಾಲೇಜು, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಭಾನುವಾರ (ಸೆ. 22ರಂದು) ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ -2024 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
ಈ ಮೂಲಕ ಶಿಕ್ಷಣ ರಂಗದಲ್ಲಿ ನೀಡುವ 2 ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ. ವಿದ್ಯಾರ್ಥಿ ಹಂತದಿಂದಲೇ ಬಹುಮುಖ ಪ್ರತಿಭೆಯಾಗಿದ್ದು, ರ್ಯಾoಕ್ ವಿಜೇತ ವಿದ್ಯಾರ್ಥಿನಿಯಾಗಿ, ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲ ಉಪನ್ಯಾಸಕಿಯಾಗಿ ಅತ್ಯುತ್ತಮ ಪಾಠ ಬೋಧನೆ, ಪಾರದರ್ಶಕ ಸೇವೆ, ಶಿಸ್ತುಬದ್ಧ, ಪ್ರಾಮಾಣಿಕ ನಡೆ-ನುಡಿಗೆ ಹೆಸರಾಗಿದ್ದಾರೆ. ಸಂಸ್ಥೆಗಳ ಶ್ರೇಯಕ್ಕಾಗಿ ಕಾರ್ಯ ದಕ್ಷತೆಯಿಂದ ಸೇವೆ ಸಲ್ಲಿಸುತ್ತಾ, ಸೇವೆಯಲ್ಲಿ ವಿಸ್ತರಿಸಿಕೊಂಡು ಮಾದರಿ ಉಪನ್ಯಾಸಕಿಯಾಗಿ ಗುರುತಿಸಿಕೊಂಡಿದ್ದಾರೆ.
ವಿಷಯಾಧಾರಿತ ತನ್ನ ಕನ್ನಡ ವಾಕ್ ಶೈಲಿಯಿಂದ ಪ್ರಸಿದ್ಧಿ ಹೊಂದಿರುವ ಇವರು ವಾಗ್ಮಿಯಾಗಿ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳ ಜನಪ್ರಿಯ ನಿರೂಪಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಸಾಕ್ಷ್ಯ ಚಿತ್ರಗಳಿಗೆ ಹಿನ್ನೆಲೆ ಧ್ವನಿಯಾಗಿ ಹೀಗೆ ಹತ್ತು ಹಲವು ಪ್ರತಿಭಾ ಶಕ್ತಿಯ ಮೂಲಕ ಜನಮಾನಸದಲ್ಲಿ ಚಿರಪರಿಚಿತರಾಗಿದ್ದಾರೆ. ಈಕೆ ಮೂಲತಃ ಅರಂತೋಡು ಗ್ರಾಮದ ಪೂಜಾರಿಮನೆಯವರಾದ ಪ್ರಸ್ತುತ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ವಾಸ್ತವ್ಯ ಹೊಂದಿರುವ ನಿವೃತ್ತ ಅಧ್ಯಾಪಕ ದಂಪತಿ ಬೆಳ್ಯಪ್ಪ ಗೌಡ ಪಿ, ಭಾಗೀರಥಿ ಕೆ ಇವರ ಪುತ್ರಿ.
ಕನ್ನಡ ಭಾಷೆ, ಸಾಹಿತ್ಯದ ಕುರಿತು ಅಪಾರ ಅಭಿಮಾನ ಹೊಂದಿ ಕನ್ನಡ ಸೇವೆ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು.
ಉಪನ್ಯಾಸಕಿಯ ಸಾಧನೆಗೆ ಅರ್ಹವಾಗಿ ಅರಸಿ ಬಂದ ಪ್ರಶಸ್ತಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಪಿಯು ವಿಭಾಗದ ಪ್ರಾಚಾರ್ಯರಾದ ಮಿಥಾಲಿ ಪಿ.ರೈ, ಕೆ ವಿ ಜಿ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಉದಯಕೃಷ್ಣ ಬಿ, ಪಿಯು ವಿಭಾಗದ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ವಿಶ್ರಾಂತ ಪ್ರಾಚಾರ್ಯರು, ಎನ್ನೆoಸಿಯ ಗೌರವ ಶೈಕ್ಷಣಿಕ ಸಲಹೆಗಾರರಾಗಿರುವ ಪ್ರೊ ಎಂ ಬಾಲಚಂದ್ರ ಗೌಡ, ಎಒಎಲ್ ಇ (ರಿ ) ಸಲಹೆಗಾರರು, ಕೆವಿಜಿ ಕಾನೂನು ಮಹಾ ವಿದ್ಯಾಲಯದ ಆಡಳಿತಾಧಿಕಾರಿ ಪ್ರೊ ಕೆ ವಿ ದಾಮೋದರ ಗೌಡ ಅವರು ಸೇರಿದಂತೆ ಗುರುಗಳು, ಗಣ್ಯರು, ಕೆವಿಜಿ ಸಮೂಹ ಸಂಸ್ಥೆಗಳ ಪ್ರಾಚಾರ್ಯರು,ಉದ್ಯೋಗಿಗಳು, ವಿದ್ಯಾಭಿಮಾನಿಗಳು, ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.