ನ್ಯೂಸ್ ನಾಟೌಟ್: ಎನ್ ಸಿ ಸಿ ಎಂದರೆ ಶಿಸ್ತು, ಸಮಯಪಾಲನೆ, ಕಠಿಣ ಪರಿಶ್ರಮ. ಶಿಬಿರದ ಅನುಭವವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಮುಂದೆ ಸೇನೆಗೆ ಸೇರುವುದರೊಂದಿಗೆ ದೇಶಸೇವೆ ಮಾಡುವಂತಾಗಲಿ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅಭಿಪ್ರಾಯಪಟ್ಟರು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ ಆಯೋಜನೆಗೊಂಡ RDC-II ಮತ್ತು CATC ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತ ಅತ್ಯಂತ ಶಾಂತಿಯುತ ರಾಷ್ಟ್ರ. ಆದರೆ ಕೆಲವು ಭಯೋತ್ಪಾದಕರಿಂದ ರಾಷ್ಟ್ರದ ನೆಮ್ಮದಿ ಹಾಳಾಗುತ್ತಿದೆ. ಇದನ್ನು ತಡೆಗಟ್ಟಲು ನಮ್ಮ ದೇಶದ ಸೈನಿಕರಿಂದ ಮಾತ್ರ ಸಾಧ್ಯ. ನಮ್ಮ ಸೇನೆಯ ಒಂದು ಭಾಗವಾಗಿರುವ ಎನ್ಸಿಸಿ ಶಿಬಿರ ಸುಳ್ಯದಲ್ಲಿ ಆಯೋಜನೆಗೊಂಡಿರುವುದು ಹೆಮ್ಮೆಯ ವಿಚಾರ. ನೆಹರೂ ಮೆಮೋರಿಯಲ್ ಕಾಲೇಜಿನ ಕೆಡೆಟ್ ಗಳು ಸೇರಿದಂತೆ 8 ಮಂದಿ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕೆಡೆಟ್ ಗಳಿಗೆ ಡಾ.ಕೆ.ವಿ. ಚಿದಾನಂದ ಶುಭ ಹಾರೈಸಿದರು.
ಶಿಬಿರದ ನೇತೃತ್ವ ವಹಿಸಿರುವ 19 ಕರ್ನಾಟಕ ಬೆಟಾಲಿಯನ್ ಎನ್ ಸಿಸಿಯ ಕಮಾಂಡಿಂಗ್ ಆಫಿಸರ್ ಲೆಫ್ಟಿನೆಂಟ್ ಕರ್ನಲ್ ರಜಿತ್ ಮುಕುಂದನ್ ಮಾತನಾಡಿ, ಕಾಲೇಜು ಅತ್ಯುತ್ತಮ ಆತಿಥ್ಯ ನೀಡಿ ಶಿಬಿರದಲ್ಲಿ ಯಾವುದೇ ಅಡಚಣೆಯಾಗದಂತೆ ಸಹಕರಿಸಿದೆ. ಶಿಬಿರದಲ್ಲಿ ಆಹಾರ, ಆರೋಗ್ಯ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದಕ್ಕೆ ಕೆವಿಜಿ ಸಂಸ್ಥೆಗೆ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಕಾರ್ಯದರ್ಶಿ ಹೇಮನಾಥ್ ಕೆ ವಿ, ಅಕಾಡೆಮಿಯ ಸಲಹೆಗಾರರಾದ ಪ್ರೊ.ಕೆ.ವಿ.ದಾಮೋದರ ಗೌಡ, ಕಾಲೇಜಿನ ಗೌರವ ಶೈಕ್ಷಣಿಕ ಸಲಹೆಗಾರ, ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಚಂದ್ರ ಎಂ. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ., ಶಿಬಿರದ ನೇತೃತ್ವ ವಹಿಸಿರುವ ಸುಬೇದಾರ್ ಮೇಜರ್ ಶಿಜು ಪಿ, ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ್ ಎಂ ಡಿ, ರಾಜ್ಯದ ವಿವಿಧ ಬೆಟಾಲಿಯನ್ ಗಳಿಂದ ಆಗಮಿಸಿದ ಅಧಿಕಾರಿ ವರ್ಗ, ವಿವಿಧ ಘಟಕಗಳ ಎನ್ ಸಿಸಿ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ಎನ್ ಸಿ ಸಿ ಕೆಡೆಟ್ ಗಳು ಉಪಸ್ಥಿತರಿದ್ದರು.